ಆಡಿದ್ದು ಜಸ್ಟ್ 89 ಟೆಸ್ಟ್ ಪಂದ್ಯಗಳನ್ನು ಮಾತ್ರ. ಆದರೆ ಕಬಳಿಸಿದ್ದು ಬರೋಬ್ಬರಿ 419 ವಿಕೆಟ್. ಅಂದರೆ ಪ್ರತಿಯೊಂದು ಪಂದ್ಯದಲ್ಲೂ 5 ವಿಕೆಟ್ಗಿಂತ ಹೆಚ್ಚಿನ ಸಾಧನೆ. ಏಷ್ಯಾದಲ್ಲಿ ಅಥವಾ ಸ್ಪಿನ್ ಟ್ರ್ಯಾಕ್ನಲ್ಲಿ ಮಾತ್ರ ಅಶ್ವಿನ್ ಕಿಂಗ್ ಅನ್ನುವವರು ಇರಬಹುದು. ಆದರೆ ಈ ಸಾಧನೆ ಕೂಡ ಕಡಿಮೆಯದ್ದಲ್ಲ. ಅದೂ ಕೂಡ ಪ್ರತೀ 50 ಎಸೆತಗಳಿಗೆ ಸರಾಸರಿಯಾಗಿ ಒಂದು ಟೆಸ್ಟ್ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಅಶ್ವಿನ್ ಮಾತ್ರ.
ಅಶ್ವಿನ್ ಬುಟ್ಟಿಯಲ್ಲೀಗ 419 ಟೆಸ್ಟ್ ವಿಕೆಟ್ಗಳಿವೆ. ಟರ್ಬನೇಟರ್ ಹರ್ಭಜನ್ ಸಿಂಗ್ 103 ಟೆಸ್ಟ್ಗಳಲ್ಲಿ ಕಬಳಿಸಿದ್ದ 417 ವಿಕೆಟ್ಗಳ ದಾಖಲೆ ಹಿಂದಕ್ಕೆ ಬಿದ್ದಿದೆ. ಅತೀ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯರ ಪೈಕಿ ಅಶ್ವಿನ್ ಈಗ 3ನೇಯವರು. ಲೆಗ್ಸ್ಪಿನ್ ಗಾರುಡಿ ಅನಿಲ್ ಕುಂಬ್ಳೆ 619 ಟೆಸ್ಟ್ ವಿಕೆಟ್ ಪಡೆದು ಭಾರತೀಯರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. 434 ಟೆಸ್ಟ್ ವಿಕೆಟ್ ಪಡೆದಿದ್ದ ಕಪಿಲ್ ದೇವ್ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಅಶ್ವಿನ್ ಕಪಿಲ್ ದೇವ್ ದಾಖಲೆಯನ್ನು ಮುರಿಯುವುದು ಖಚಿತ.
ನ್ಯೂಜಿಲೆಂಡ್ ವಿರುದ್ದ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಪಡೆದಿದ್ದ ಅಶ್ವಿನ್, ಇದೀಗ 2ನೇ ಇನಿಂಗ್ಸ್ನಲ್ಲಿ ಎರಡು ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಒಟ್ಟು ವಿಕೆಟ್ಗಳ ಸಂಖ್ಯೆಯನ್ನು 418 ಕ್ಕೇರಿಸಿದ್ದಾರೆ. ಈ ಮೂಲಕ 417 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದ ಹರ್ಭಜನ್ ಸಿಂಗ್ ಅವರನ್ನು ಅಶ್ವಿನ್ ಹಿಂದಿಕ್ಕಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪಟ್ಟಿಯಲ್ಲಿ ಸದ್ಯ ಅಶ್ವಿನ್ 13ನೇ ಸ್ಥಾನಕ್ಕೇರಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 708 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ 2ನೇ ಸ್ಥಾನದಲ್ಲಿದ್ದಾರೆ. 632 ವಿಕೆಟ್ ಉರುಳಿಸಿರುವ ಇಂಗ್ಲೆಂಡ್ನ ಜೇಮ್ಸ್ ಅಂಡರ್ಸನ್ 3ನೇ ಸ್ಥಾನದಲ್ಲಿದ್ದರೆ, 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ. ಈ ನಾಲ್ವರು ಬೌಲರುಗಳು ಮಾತ್ರ ಟೆಸ್ಟ್ನಲ್ಲಿ 600ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಕೆಲವೇ ವರ್ಷಗಳಲ್ಲಿ ಈ ದಾಖಲೆಯ ಸನಿಹಕ್ಕೆ ಬಂದರೂ ಅಚ್ಚರಿ ಇಲ್ಲ..!