ಅರ್ಜೆಂಟೈನಾದ ಲಿಯೊನಲ್ ಮೆಸ್ಸಿ ಆಧುನಿಕ ಫುಟ್ಬಾಲ್ ಜಗತ್ತಿನ ಗೋಲ್ ಮಷಿನ್. ದೇಶ ಯಾವುದೇ ಇರಲಿ, ಪ್ರತಿನಿಧಿಸುವ ತಂಡ ಯಾವುದು ಬೇಕಾದರೂ ಆಗಿರಲಿ, ಅರ್ಜೆಂಟೈನಾ ಈ ಆಟಗಾರ ಗೋಲು ಗಳಿಸುವುದರಲ್ಲಿ ನಂಬರ್ ವನ್. ತನ್ನ ಲೆಫ್ಟ್ ಫೂಟ್ ಕಿಕ್ ನಿಂದಲೇ ಎದುರಾಳಿ ಗೋಲಿಯನ್ನು ವಂಚಿಸುವ ಚಾಣಾಕ್ಷ ಚತುರ ಈತ. ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಲಿಯೊನೆಲ್ ಮೆಸ್ಸಿ ಈಗ ಹೊಸ ದಾಖಲೆ ಬರೆದಿದ್ದಾರೆ.
ಲಿಯೋನೆಲ್ ಮೆಸ್ಸಿ 7 ನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ದಾಖಲೆ ನಿರ್ಮಿಸಿದ್ದಾರೆ. ಅತ್ಯುತ್ತಮ ಆಟಗಾರ ವಿಭಾಗದಲ್ಲಿ ಮೆಸ್ಸಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿ ಲಭ್ಯವಾಗಿದೆ. ಫ್ರಾನ್ಸ್ ನ ಫುಟ್ಬಾಲ್ ನಿಯತಕಾಲಿಕೆ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ನೀಡುತ್ತಿದೆ. ಮೆಸ್ಸಿ 2009 ರಿಂದ 2012 ವರೆಗೆ ಸತತವಾಗಿ ಪ್ರಶಸ್ತಿಯನ್ನು ಗಳಿಸಿದ್ದರು. 2015 ಮತ್ತು 2019 ರಲ್ಲೂ ಈ ಪ್ರಶಸ್ತಿ ಬಾಚಿಕೊಂಡಿದ್ದರು. ಈಗ ಮತ್ತೊಮ್ಮೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮೆಸ್ಸಿ ತನ್ನದಾಗಿಸಿಕೊಂಡಿದ್ದಾರೆ.