ಟೀಮ್ ಇಂಡಿಯಾದ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ ರನ್ ಕಲೆ ಹಾಕುವಲ್ಲಿ ಎಡವುತ್ತಿದ್ದಾರೆ. ಪರಿಣಾಮ ಅವರಿಗೆ ಫಾರ್ಮ್ ಕಂಡುಕೊಂಡು ರಾಷ್ಟ್ರೀಯ ತಂಡಕ್ಕೆ ಮರಳುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಪರಿಣಾಮ ಅಜಿಂಕ್ಯ ರಹಾನೆ ದೇಶಿಯ ರಣಜಿ ಟೂರ್ನಿಯಲ್ಲಿ ಮುಂಬೈ ತಂಡದ ಪರ ಬ್ಯಾಟ್ ಮಾಡುತ್ತಿದ್ದಾರೆ. ಆಡಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಆಯ್ಕೆದಾರರಿಗೆ ಸಂದೇಶ ರವಾನಿಸಿದ್ದ ರಹಾನೆ ಬಳಿಕ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ. ಇವರ ಇನ್ನೋರ್ವ ಸಾಥಿ ಚೆತೇಶ್ವರ್ ಪೂಜಾರ ಸಹ ದೇಶಿಯ ಟೂರ್ನಿಯಲ್ಲಿ ರನ್ ಬರ ಅನುಭವಿಸುತ್ತಿದ್ದಾರೆ.
ಗುರುವಾರದಿಂದ ಆರಂಭವಾದ ರಣಜಿ ಟೂರ್ನಿಯ ಪಂದ್ಯದಲ್ಲಿ ಮುಂಬೈ ತಂಡ ಓಡಿಶಾ ತಂಡದ ವಿರುದ್ಧ ಕಾದಾಟ ನಡೆಸಿತು. ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡದ ಪರ ಅಜಿಂಕ್ಯ ರಹಾನೆ ಎದುರಿಸಿದ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿದರು. ರಾಜೇಶ್ ಮೊಹಾಂತಿ ಅವರು ಎಸೆದ ಚೆಂಡನ್ನು ತಪ್ಪಾಗಿ ಗ್ರಹಿಸಿದ ರಹಾನೆ, ಗೋವಿಂದ ಪೊದ್ದಾರ್ ಗೆ ಕ್ಯಾಚ್ ನೀಡಿದರು.
ಸೌರಾಷ್ಟ್ರ ಪರ ಆಡಿದ ಪೂಜಾರ ಸಹ ಹೆಚ್ಚಿನ ಕಾಣಿಕೆಯನ್ನು ತಂಡಕ್ಕೆ ನೀಡಲಿಲ್ಲ. ಇವರು ಸಹ ರನ್ ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಎದುರಿಸಿದ 26 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 28 ರನ್ ಬಾರಿಸಿ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದರು. ಆದರೆ ಮಿಸಾಲ್ ತೋಡಿದ ಖೆಡ್ಡಾಗೆ ಬಲಿಯಾದರು.