ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್(52) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ಪಿನ್ ದಿಗ್ಗಜನ ಸಾವಿನ ಸುದ್ದಿ ಕ್ರಿಕೆಟ್ ಜಗತ್ತನ್ನು ತಲ್ಲಣಗೊಳಿಸಿದೆ.
ಥೈಲ್ಯಾಂಡ್ ನಲ್ಲಿ ವಾಸವಾಗಿದ್ದ ಶೇನ್ ವಾರ್ನ್, ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವೈದ್ಯರು ಶೇನ್ ವಾರ್ನ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಿದರು ವಾರ್ನ್ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ವಿಶ್ವ ಕ್ರಿಕೆಟ್ ಕಂಡ ಸರ್ವ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ಶೇನ್ ವಾರ್ನ್, ತಮ್ಮ ಚಾಣಾಕ್ಷ ಲೆಗ್ ಸ್ಪಿನ್ ಮೂಲಕ ಕ್ರಿಕೆಟ್ ಜಗತ್ತಿನ ದಿಗ್ಗಜ ಬ್ಯಾಟ್ಸಮನ್ ಗಳಿಗೆ ಮಣ್ಣು ಮುಕ್ಕಿಸಿದ್ದರು. ಒಂದು ಕಾಲದಲ್ಲಿ ಆಸೀಸ್ ಕ್ರಿಕೆಟ್ ನ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ವಾರ್ನ್, 1992-2007ರವರೆಗೆ ಕ್ರಿಕೆಟ್ ಜಗತ್ತಿನ ಸ್ಪಿನ್ ಮಾಂತ್ರಿಕನಾಗಿ ಮಿಂಚಿದ್ದರು. ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಪಡೆದಿದ್ದಾರೆ. 1999ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶೇನ್ ವಾರ್ನ್, ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.
*ಬರಸಿಡಿಲಿನಂತೆ ಅಪ್ಪಳಿಸಿದ ವಾರ್ನ್ ಸಾವಿನ ಸುದ್ದಿ*
ಸ್ಪಿನ್ ದಿಗ್ಗಜ ಶೇನ್ ವಾರ್ನ್ ಹಠಾತ್ ಸಾವಿನ ಸುದ್ದಿ ಕ್ರಿಕೆಟ್ ಜಗತ್ತಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಸಕ್ರಿಯವಾಗಿದ್ದ ಶೇನ್ ವಾರ್ನ್, ರೋಡ್ ಮಾರ್ಷ್ ಅವರ ಸಾವಿನ ಬಗ್ಗೆ ಕಂಬನಿ ಮಿಡಿದು, ಟ್ವೀಟ್ ಒಂದನ್ನ ಮಾಡಿದ್ದರು. ಆದರೆ ಸಂಜೆ ವೇಳೆಗೆ ವಾರ್ನ್ ಅವರು ಸಾವನ್ನಪ್ಪಿರುವ ವಿಷಯ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಆಸೀಸ್ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರ ನಿಧನಕ್ಕೆ ವಿಶ್ವ ಕ್ರಿಕೆಟ್ ನ ಹಾಲಿ ಹಾಗೂ ಮಾಜಿ ಆಟಗಾರರು ಕಂಬನಿ ಮಿಡಿದಿದ್ದಾರೆ.