“1 ಐಪಿಎಲ್ ಟೂರ್ನಿ… 12 ವರ್ಷಗಳ ಜರ್ನಿ… 9 ಬೇರೆ ಬೇರೆ ತಂಡ…” ಇದು ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್ ಅವರ ಐಪಿಎಲ್ ಬಯೋಡೇಟಾ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿರ್ದಿಷ್ಟ ನೆಲೆ ಕಂಡುಕೊಳ್ಳುವಲ್ಲಿ ವಿಫಲರಾಗಿರುವ ಆರನ್ ಫಿಂಚ್, ಪ್ರಸಕ್ತ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ ಆಡಲಿದ್ದಾರೆ. ಆ ಮೂಲಕ ತಮ್ಮ 9ನೇ ಫ್ರಾಂಚೈಸಿಯನ್ನ ಪ್ರತಿನಿಧಿಸುತ್ತಿರುವ ಫಿಂಚ್, ಐಪಿಎಲ್‌ನಲ್ಲಿ ಅತಿ ಹೆಚ್ಚು ತಂಡಗಳ ಪರ ಆಡಿದ ಆಟಗಾರ ಎನಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಚೊಚ್ಚಲ ಟಿ20 ವಿಶ್ವಕಪ್ ತಂದುಕೊಟ್ಟ ಹೆಗ್ಗಳಿಕೆ ಪಡೆದಿರುವ 35 ವರ್ಷದ ಆರನ್ ಫಿಂಚ್, ಐಪಿಎಲ್‌ನಲ್ಲಿ ಈವರೆಗೂ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸ್ಪೋಟಕ ಬ್ಯಾಟ್ಸಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಫಿಂಚ್, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಮಾತ್ರ ತಮ್ಮ ಬ್ಯಾಟಿಂಗ್ ಖದರ್ ತೋರಿಸುವಲ್ಲಿ ವಿಫಲರಾಗಿದ್ದಾರೆ. ಈ ಅಸ್ಥಿರ ಪ್ರದರ್ಶನದಿಂದ ಆರನ್ ಫಿಂಚ್ ಅವರಿಗೆ ಐಪಿಎಲ್‌ನಲ್ಲಿ ನಿರ್ದಿಷ್ಟ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಆರನ್ ಫಿಂಚ್ ಐಪಿಎಲ್ ಜರ್ನಿ
2010ರಲ್ಲಿ ಐಪಿಎಲ್ ಜರ್ನಿ ಆರಂಭಿಸಿದ ಆರನ್ ಫಿಂಚ್, ಮೊದಲನೇ ವರ್ಷ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ರತಿನಿಧಿಸಿದ್ದರು. 2011-12ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕಾಣಿಸಿಕೊಂಡ ಫಿಂಚ್, 2013ರಲ್ಲಿ ಪುಣೆ ವಾರಿಯರ್ಸ್, 2014ರಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್, 2015ರಲ್ಲಿ ಮುಂಬೈ ಇಂಡಿಯನ್ಸ್, 2016-17ರಲ್ಲಿ ಗುಜರಾತ್ ಲಯನ್ಸ್, 2018 ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಇದೀಗ 15ನೇ ಸೀಸನ್ ಐಪಿಎಲ್‌ನಲ್ಲಿ ತಮ್ಮ 9ನೇ ಫ್ರಾಂಚೈಸಿಯಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಲಿದ್ದಾರೆ.
ಫಿಂಚ್ ಗಳಿಸಿದ್ದು ಅಲ್ಪ ಯಶಸ್ಸು
ಐಪಿಎಲ್‌ನ ಬಹುಪಾಲು ಎಲ್ಲಾ ತಂಡಗಳ ಜರ್ಸಿಯಲ್ಲಿ ಕಾಣಿಸಿಕೊಂಡಿರುವ ಆರನ್ ಫಿಂಚ್, ತಮ್ಮ 12 ವರ್ಷಗಳ ಐಪಿಎಲ್ ಜರ್ನಿಯಲ್ಲಿ ಗಳಿಸಿದ್ದು ಅಲ್ಪ ಯಶಸ್ಸು ಮಾತ್ರ. ಐಪಿಎಲ್‌ನಲ್ಲಿ ಈವರೆಗೂ 85 ಪಂದ್ಯಗಳನ್ನು ಆಡಿರುವ ಫಿಂಚ್, 25.70 ಸರಾಸರಿ ಹಾಗೂ 127.70 ಸ್ಟ್ರೈಕ್ ರೇಟ್‌ನೊಂದಿಗೆ 2005 ರನ್ ಗಳಿಸಿದ್ದಾರೆ.