15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಇಂಗ್ಲೆಂಡ್ನ ಸ್ಪೋಟಕ ಬ್ಯಾಟ್ಸಮನ್ ಅಲೆಕ್ಸ್ ಹೇಲ್ಸ್, ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇವರ ಸ್ಥಾನಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್, ಪ್ರಸಕ್ತ ಐಪಿಎಲ್ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಮಾ.26ರಿಂದ ಆರಂಭವಾಗಲಿರುವ ಈ ಬಾರಿಯ ಐಪಿಎಲ್ನಲ್ಲಿ 10 ತಂಡಗಳು ಸೆಣೆಸಾಟ ನಡೆಸಲಿದ್ದು, 70 ಲೀಗ್ ಪಂದ್ಯಗಳು ನಡೆಯಲಿವೆ. ಕೋವಿಡ್-19 ಕಾರಣದಿಂದ ಈ ಬಾರಿಯ ಐಪಿಎಲ್ ಟೂರ್ನಿ ಸಹ ಬಯೋ ಬಬಲ್ನಲ್ಲಿ ನಡೆಯಲಿದೆ. ಹೀಗಾಗಿ ದೀರ್ಘಾವಧಿವರೆಗೂ ಬಯೋ ಬಬಲ್ನಲ್ಲಿರಲು ಸಾಧ್ಯವಿಲ್ಲ ಎಂದು ನಿರ್ಧರಿಸಿರುವ ಅಲೆಕ್ಸ್ ಹೇಲ್ಸ್, ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ತೀರ್ಮಾನ ಕೈಗೊಂಡಿದ್ದಾರೆ.
ಇಂಗ್ಲೆಂಡ್ನ ಅಗ್ರ ಕ್ರಮಾಂಕದ ಬ್ಯಾಟ್ಸಮನ್ ಅಲೆಕ್ಸ್ ಹೇಲ್ಸ್, ಈ ಬಾರಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ 1.5 ಕೋಟಿ ಮೊತ್ತಕ್ಕೆ ಕೆಕೆಆರ್ ತಂಡ ಸೇರಿದ್ದರು. ಆದರೆ ಇದೀಗ ಅಲೆಕ್ಸ್ ಹೇಲ್ಸ್ ಐಪಿಎಲ್ನಿಂದ ಹೊರಗುಳಿದಿರುವುದರಿಂದ ಆಸೀಸ್ ಕ್ಯಾಪ್ಟನ್ ಆರನ್ ಫಿಂಚ್, 1.5 ಕೋಟಿಗೆ ಕೆಕೆಆರ್ ತಂಡ ಸೇರಿದ್ದಾರೆ.
ಈ ಹಿಂದೆ ಇಂಗ್ಲೆಂಡ್ ತಂಡದ ಮತ್ತೋರ್ವ ಆಟಗಾರ ಜೇಸನ್ ರಾಯ್ ಸಹ ಬಯೋ ಬಬಲ್ನಲ್ಲಿ ಉಳಿಯಲು ಸಾಧ್ಯವಿಲ್ಲವೆಂದು ನಿರ್ಧರಿಸಿ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರು. ಗುಜರಾತ್ ಟೈಟನ್ಸ್ ಪರ ಆಡಬೇಕಿದ್ದ ಜೇಸನ್ ರಾಯ್ ಅವರ ಸ್ಥಾನಕ್ಕೆ ಅಫ್ಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್ಅವರು ಗುಜರಾತ್ ಟೈಟನ್ಸ್ ತಂಡ ಸೇರಿದ್ದಾರೆ.