ಅತಿಥೇಯ ಇಂಗ್ಲೆಂಡ್ ಬೌಲರ್‌ಗಳ ಪ್ರಾಬಲ್ಯದ ನಡುವೆಯೂ ಉತ್ತಮ ಕಮ್‌ಬ್ಯಾಕ್ ಮಾಡಿದ ನ್ಯೂಜಿ಼ಲೆಂಡ್, ಡೆರಿಲ್ ಮಿಚೆಲ್(78*) ಹಾಗೂ ಟಾಮ್ ಬ್ಲಂಡಲ್(45*) ಅವರುಗಳ ಜವಾಬ್ದಾರಿಯ ಆಟದಿಂದ 3ನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ಸಮಬಲದ ಪ್ರದರ್ಶನ ನೀಡಿದೆ.
ಹೆಡಿಂಗ್ಲಿಯಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿ಼ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಸಿಲುಕಿದ ಕಿವೀಸ್, ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಈ ಹಂತದಲ್ಲಿ ಜೊತೆಯಾದ ಮಿಚೆಲ್(78*) ಹಾಗೂ ಬ್ಲಂಡಲ್(45*) ನೆರವಿನಿಂದ ಮೊದಲ ದಿನದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 225 ರನ್‌ಗಳಿಸಿದೆ.

ಕೈಕೊಟ್ಟ ಅಗ್ರ ಕ್ರಮಾಂಕ:
ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿ಼ಲೆಂಡ್, ಎದುರಾಳಿ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಸಿಲುಕಿತು. ಆರಂಭಿಕನಾಗಿ ಬಂದ ಟಾಮ್ ಲಾಥಂ(0) ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಮರಳಿದರು. ನಂತರ ಜೊತೆಯಾದ ವಿಲ್ ಯಂಗ್(20) ಹಾಗೂ ನಾಯಕ ವಿಲಿಯಂಸನ್(31) ಅಲ್ಪಮೊತ್ತದ ರನ್‌ಗಳಿಸಿ ನಿರ್ಗಮಿಸಿದರು. ಬಳಿಕ ಕಣಕ್ಕಿಳಿದ ಡೆವೊನ್ ಕಾನ್ವೆ(26) ಹಾಗೂ ಹೆನ್ರಿ ನಿಕೋಲ್ಸ್(19) ಸಹ ನಿರೀಕ್ಷಿತ ಆಟವಾಡಲಿಲ್ಲ. ಪರಿಣಾಮ 123ಕ್ಕೆ ಅಗ್ರ ಕ್ರಮಾಂಕದ 5 ವಿಕೆಟ್‌ಗಳನ್ನು ಕಳೆದುಕೊಂಡು ಕಿವೀಸ್ ಸಂಕಷ್ಟಕ್ಕೆ ಸಿಲುಕಿತು.
ಮಿಚೆಲ್-ಬ್ಲಂಡಲ್ ಆಸರೆ:
ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿ಼ಲೆಂಡ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ಡೆರಿಲ್ ಮಿಚೆಲ್(78*) ಹಾಗೂ ಟಾಮ್ ಬ್ಲಂಡಲ್(45*) ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ, ನಿಧಾನ ಗತಿಯಲ್ಲಿ ರನ್‌ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಅಲ್ಲದೇ 6ನೇ ವಿಕೆಟ್‌ಗೆ ಅಜೇಯ 102* ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಹಾಗೂ ಜ್ಯಾಕ್ ಲೀಚ್ 2 ವಿಕೆಟ್ ಪಡೆದರೆ. ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಜೇಮೀ ಓವರ್ಟನ್ 1 ವಿಕೆಟ್ ಪಡೆದರು.