36th National Games: ಈಜು, ಬ್ಯಾಡ್ಮಿಂಟನ್ ನಲ್ಲಿ ಪದಕ ಬಾಚಿಕೊಂಡ ಕರ್ನಾಟಕ
36ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಗುರುವಾರ ಈಜು ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಕರ್ನಾಟಕ ಪದಕಗಳನ್ನು ಬಾಚಿಕೊಂಡಿದೆ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಕರ್ನಾಟದ ಪದಕದ ಬೇಟೆ ನಡೆಸಿದೆ. ರಾಜ್ಯದ ಅಶ್ವಿನಿ ಪೊನ್ನಪ್ಪ ಹಾಗೂ ಸಾಯ್ ಪ್ರತಿಕ್ ಜೋಡಿ 21-15, 21-13 ರಿಂದ ದೆಹಲಿ ಜೋಡಿಯನ್ನು ಮಣಿಸಿದೆ.
ಕರ್ನಾಟಕ ವನಿತೆಯರ ಜೋಡಿ 14-21, 11-21 ರಿಂದ ತೆಲಂಗಣ ವಿರುದ್ಧ, ಪುರುಷರ ಸಿಂಗಲ್ಸ್ ನಲ್ಲಿ ವಿಥುನ್ ಎಂ 12-21, 19-21 ರಿಂದ ತೆಲಂಗಾಣದ ಬಿ ಸಾಯ್ ಪ್ರಣಿತ್ ವಿರುದ್ಧ ನಿರಾಸೆ ಅನುಭವಿಸಿ ಬೆಳ್ಳಿ ಪಡೆದರು.
ಉಳಿದಂತೆ ಪುರುಷರ ಸಿಂಗಲ್ಸ್ ನಲ್ಲಿ ರಘು ಎಂ, ಮಹಿಳಾ ಸಿಂಗಲ್ಸ್ ನಲ್ಲಿ ತನ್ಯಾ ಹೇಮಂತ್, ಪುರುಷರ ಡಬಲ್ಸ್ ನಲ್ಲಿ ವೈಭವ್, ನಿತೀನ್ ಎಚ್.ವಿ ಕಂಚು ಪಡೆದಿದ್ದಾರೆ.
ಪುರುಷರ 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಭರವಸೆಯ ಈಜು ಪಟು ಶ್ರೀಹರಿ ನಟರಾಜ್ ಅವರು ಕೂಟ ದಾಖಲೆ ಮಾಡುವ ಮೂಲಕ ಬಂಗಾರ ಪಡೆದಿದ್ದಾರೆ. ಇವರು ನಿಗದಿತ ದೂರವನ್ನು 55.80 ಸೆಕೆಂಡ್ ಗಳಲ್ಲಿ ಕ್ರಮಿಸಿದರು. ಅಲ್ಲದೆ ಕೇರಳದ ಮಧು ಪಿಎಸ್ ಅವರ ದಾಖಲೆ ಅಳಿಸಿದರು. ಈ ವಿಭಾಗದ ಬೆಳ್ಳಿ ವಿನಾಯಕ್ ವಿ ಪಾಲಾದರೆ, ಕಂಚು ರಾಜ್ಯದ ಶಿವ್ ಎಸ್ ತಮ್ಮದಾಗಿಸಿಕೊಂಡರು.
ಮಹಿಳೆಯರ 50 ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ನಿನಾ ವೆಂಕಟೇಶ್ ಅವರು (28.39 ಸೆಕೆಂಡ್) ನೂತನ ಕೂಟ ದಾಖಲೆಯೊಂದಿಗೆ ಸ್ವರ್ಣದ ನಗೆ ಬೀರಿದ್ದಾರೆ. ಇವರು ರಾಜಕೋಟ್ ದಿವ್ಯಾ ಅವರ ದಾಖಲೆ ಅಳಿಸಿದರು. ಈ ವಿಭಾಗದ ಬೆಳ್ಳಿ ಹರಿಯಾಣದ ದಿವ್ಯಾ ಪಡೆದರೆ, ರಾಜ್ಯದ ತನಿಶಿ ಗುಪ್ತಾ ಕಂಚು ಪಡೆದರು.
ರಿಧಿಮಾ ವೀರೇಂದ್ರ ಕುಮಾರ್ ಅವರು ಮಹಿಳೆಯರ 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ರಜತ ಗೆದ್ದರು.
ಕರ್ನಾಟಕದ ಈಜು ಪಟುಗಳು ಕ್ರೀಡಾಕೂಟದಲ್ಲಿ ಒಟ್ಟು 14 ಬಂಗಾರ, 5 ಬೆಳ್ಳಿ, 8 ಕಂಚಿನ ಪದಕ ಪಡೆದಿದೆ.
36th National Games, Swimming, Badminton, Gold, Silver