M.S.Dhoni – ಧೋನಿ ಬಗ್ಗೆ ಯುಜುವೇಂದ್ರ ಚಾಹಲ್ ಹೇಳುವುದು ಇಷ್ಟೇ… ಧೋನಿ ಅಂದ್ರೆ..!
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನನ್ನ ಕ್ರಿಕೆಟ್ ಬದುಕಿನಲ್ಲಿ ಗಾಢವಾದ ಪರಿಣಾಮ ಬೀರಿದ್ರು. ಅಲ್ಲದೆ ನನ್ನ ಯಶಸ್ಸಿಗೆ ಬೆಂಬಲವಾಗಿ ನಿಂತಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ಸಲಹೆ ಮಾರ್ಗದರ್ಶನಗಳಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು 31ರ ಹರೆಯದ ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ಹೇಳಿದ್ದಾರೆ.
ಆರ್. ಅಶ್ವಿನ್ ಅವರ ಯೂ ಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಯುಜುವೇಂದ್ರ ಚಾಹಲ್ ಅವರು, ನಾನು ಮತ್ತು ಕುಲದೀಪ್ ಸಿಂಗ್ ಯಾದವ್ ಧೋನಿ ಭಾಯ್ ಅವರ ಸಹಾಯದಿಂದಲೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯ್ತು. ಅವರು ನಮ್ಮ ಕೆಲಸವನ್ನು ಸುಲಭಗೊಳಿಸುತ್ತಿದ್ದರು. ಅವರ ಸಲಹೆ ಮಾರ್ಗದರ್ಶನದಂತೆ ಬೌಲಿಂಗ್ ಮಾಡಿದ್ರೆ ಸಾಕಿತ್ತು. ಅದಕ್ಕಿಂತ ಹೆಚ್ಚು ಯೋಚನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಹೀಗಾಗಿಯೇ ನಮಗೆ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿತ್ತು ಎಂದು ಯುಜುವೇಂದ್ರ ಚಾಹಲ್ ಹೇಳಿದ್ದಾರೆ.
ಇನ್ನು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟಿ-20 ಪಂದ್ಯವೊಂದರ ಘಟನೆಯನ್ನು ಚಾಹಲ್ ನೆನಪಿಸಿಕೊಂಡ್ರು. ಅದು 2018, ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಪಂದ್ಯ. ನಾನು ನನ್ನ ನಾಲ್ಕು ಓವರ್ ಗಳ ಕೋಟಾದಲ್ಲಿ 64ರನ್ ನೀಡಿದ್ದೆ. ಇದೇ ವೇಳೆ ಹೆನ್ರಿಚ್ ಕ್ಲಾಸೆನ್ ಅವರ ನನ್ನ ಎಸೆತವೊಂದನ್ನು ಮಿಡ್ ವಿಕೆಟ್ ಮೂಲಕ ಸಿಕ್ಸರ್ ಬಾರಿಸಿದ್ದರು. ಆಗ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆಗ ನನ್ನ ಬಳಿ ಧೋನಿ ಭಾಯ್ ಬಂದ್ರು. ಆಗ ನಾನು ಹೌದು, ಧೋನಿ ಭಾಯ್.. ನಾನು ಏನು ಮಾಡಬೇಕು ಎಂದು ಕೇಳಿದ್ದೆ. ಅದಕ್ಕೆ ಧೋನಿ ಏನು ಇಲ್ಲ. ನಾನು ನಿನ್ನ ಬಳಿ ಬಂದಿದ್ದೇನೆ ಅಂತ ಹೇಳಿದ್ರು. ಹಾಗೇ ಇವತ್ತು ನಿನ್ನ ದಿನವಲ್ಲ. ನೀವು ಉತ್ತಮ ಬೌಲಿಂಗ್ ಮಾಡಲು ಪ್ರಯತ್ನ ಪಡುತ್ತಿದ್ದೀಯಾ. ಆದ್ರೆ ಅದು ಆಗುತ್ತಿಲ್ಲ. ಈ ಬಗ್ಗೆ ಹೆಚ್ಚು ಯೋಚಿಸಬೇಡ. ನಿನ್ನ ಕೋಟಾದ ಓವರ್ ಅನ್ನು ಬೇಗ ಮುಗಿಸು. ಚಿಲ್ ಮಾಡು ಎಂದು ಧೋನಿ ಹೇಳಿರುವುದನ್ನು ಚಾಹಲ್ ಇದೇ ವೇಳೆ ನೆನಪಿಸಿಕೊಂಡ್ರು.
ಇದರಿಂದ ನಾನು ಕಲಿತುಕೊಂಡಿದ್ದು ಇಷ್ಟೇ. ಎಲ್ಲಾ ಸಮಯದಲ್ಲೂ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಸಾಧ್ಯವಿಲ್ಲ ಎಂಬುದು. ಹಾಗೇ ಧೋನಿಯವರ ಬೆಂಬಲ ನನಗೆ ಸಾಕಷ್ಟು ಸ್ಪೂರ್ತಿಯನ್ನು ನೀಡಿತ್ತು. ಯಾಕಂದ್ರೆ ಆ ಸಮಯದಲ್ಲಿ ನಿಮ್ಮನ್ನು ನಿಂದಿಸಿದ್ರೆ ಮಾನಸಿಕವಾಗಿ ಆತ್ಮವಿಶ್ವಾಸ ಕುಗ್ಗಿ ಹೋಗುತ್ತಿತ್ತು. ಹೀಗೆ ಧೋನಿ ಅವರ ಮಾರ್ಗದರ್ಶನ ನನಗೆ ತುಂಬಾನೇ ನೆರವಾಗುತ್ತಿತ್ತು ಎಂದು ಚಾಹಲ್ ಹೇಳಿದ್ದಾರೆ.
ಫೆಬ್ರವರಿ 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಸರಣಿಯನ್ನು ಚಾಹಲ್ ಎದುರು ನೋಡುತ್ತಿದ್ದಾರೆ. ಹಾಗೇ ಐಪಿಎಲ್ ನಲ್ಲಿ ಆರ್ ಸಿಬಿ ತಂಡದಲ್ಲಿದ್ದ ಚಾಹಲ್, ಮುಂದಿನ ಐಪಿಎಲ್ ನಲ್ಲಿ ಯಾವ ತಂಡದ ಪಾಲಾಗುತ್ತಾರೆ ಅನ್ನೋದನ್ನು ಕೂಡ ಕಾದು ನೋಡಬೇಕು.