ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ ಹೀನಾಯ ಪ್ರದರ್ಶನ ಮುಂದುವರಿದಿದೆ. ೨೦೧೩ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಹಾಗೆಯೇ, ಈ ಬಾರಿಯ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಭಾರತ, ಸೂಪರ್-12 ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ಸ್ ತಲುಪಿತ್ತು. ಆದರೆ, ಸೆಮಿಸ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಹೀನಾಯ ಸೋಲು ಕಂಡು, ಭಾರಿ ಟೀಕೆಗೆ ಒಳಗಾಗಿದೆ.
ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಸೇರಿದಂತೆ ಅನೇಕರು ಭಾರತದ ಸೋಲಿಗೆ ಅಸಮಾಧಾನ ಹೊರಹಾಕಿದ್ದಾರೆ. 1983ರ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಮಾತನಾಡಿ, ಸತತವಾಗಿ ಐಸಿಸಿ ಟೂರ್ನಿಗಳ ನಾಕ್‌ಔಟ್ ಹಂತದಲ್ಲಿ ಮುಗ್ಗರಿಸುತ್ತಿರುವ ಟೀಮ್ ಇಂಡಿಯಾವನ್ನು ಈಗ ಚೋಕರ್ಸ್ ಎಂದು ಕರೆಯಬೇಕು. ಟ್ರೋಫಿಗೆ ಹತ್ತಿರ ಬಂದು ಉಸಿರುಗಟ್ಟಿಸಿಕೊಳ್ಳುತ್ತಿದೆ. ಆದರೂ ಭಾರತ ತಂಡದ ವಿರುದ್ಧ ಕಟುವಾಗಿ ಟೀಕಿಸುವ ಅಗತ್ಯವಿಲ್ಲ. ಭಾರತ ತಂಡ ಕಳಪೆ ಆಟವಾಡಿದೆ ಎಂಬುದು ನಿಜ. ಆದರೂ, ಕೇವಲ ಒಂದು ಪಂದ್ಯದಲ್ಲಿನ ಸೋಲಿನ ಬಳಿಕ ತೀರಾ ಕಟುವಾಗಿ ಟೀಕೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಜೊತೆ ಮಾತನಾಡಿರುವ ಗಂಭೀರ್, ಯಾರಾದರೂ ರೋಹಿತ್ ಶರ್ಮಾಗಿಂತ ಹೆಚ್ಚಿನ ದ್ವಿಶತಕಗಳನ್ನು ಸಿಡಿಸಬಹುದು. ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಶತಕಗಳನ್ನು ಗಳಿಸಬಹುದು. ಆದರೆ, ಎಂ.ಎಸ್.ಧೋನಿ ಅವರಂತೆ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಬಹುದಾದ ಭಾರತ ತಂಡದ ನಾಯಕ ಬರಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.
ಕೆಲ ಆಟಗಾರರು ನಿವೃತ್ತಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ ನಾಯಕತ್ವ ಸ್ವೀಕರಿಸುವ ಸಾಧ್ಯತೆ ಇದೆ. ನಿವೃತ್ತಿ ಬಗ್ಗೆ ಆಟಗಾರರು ಈಗ ಗಂಭೀರವಾಗಿ ಚಿಂತಿಸಲಿದ್ದಾರೆ. ತಂಡದಲ್ಲಿ 33 ವರ್ಷ ದಾಟಿದ ಹಲವು ಆಟಗಾರರಿದ್ದಾರೆ. ಅವರು ಭಾರತ ಟಿ20 ತಂಡದಲ್ಲಿ ತಮ್ಮ ಸ್ಥಾನದ ಬಗ್ಗೆ ಅವಲೋಕನ ಮಾಡಿಕೊಳ್ಳಲಿದ್ದಾರೆ ಎಂದು ಗವಾಸ್ಕರ್ ನುಡಿದಿದ್ದಾರೆ.