ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದು, ನ.13ರಂದು ನಡೆಯುವ ಫೈನಲ್ ಫೈಟ್ಗಾಗಿ ಇಂಗ್ಲೆಂಡ್(England) ಹಾಗೂ ಪಾಕಿಸ್ತಾನ(Pakistan) ತಂಡಗಳು ಸಹ ಸಜ್ಜಾಗಿವೆ.
ಮೆಲ್ಬೋರ್ನ್ ಅಂಗಳದಲ್ಲಿ ನಡೆಯುವ T20 ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ಇಂಟರ್ ನ್ಯಾಷಿನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಅಂತಿಮ ಪಂದ್ಯದಲ್ಲಿ ಕಾರ್ಯನಿರ್ವಹಿಸುವ ಮ್ಯಾಚ್ ಅಫಿಶಿಯಲ್ಸ್ಗಳ ಹೆಸರುಗಳನ್ನು ಪ್ರಕಟಿಸಿದೆ. ಕಾಂಗರೂ ನಾಡಿನ ಐತಿಹಾಸಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಜೋಸ್ ಜೋಸ್ ಬಟ್ಲರ್ ತಂಡ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲು ಸಜ್ಜಾಗಿದೆ. ಎರಡು ತಂಡಗಳು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಹದ್ದಿನ ಕಣ್ಣಿನಂತೆ ಕೆಲಸ ಮಾಡಲಿರುವ ಅಂಪೈರ್ಗಳು ಹಾಗೂ ಇನ್ನಿತರ ಅಧಿಕಾರಿಗಳ ಹೆಸರನ್ನು ಘೋಷಿಸಿದೆ.
ಎಂಟನೇ ಐಸಿಸಿ ಪುರುಷರ ಟಿ20 ವಿಶ್ವಕಪ್ನ ಫೈನಲ್ಗೆ ಪಂದ್ಯದಲ್ಲಿ ಅನುಭವಿ ಅಂಪೈರ್ಗಳಾದ ಮರೈಸ್ ಎರಾಸ್ಮಸ್ ಮತ್ತು ಕುಮಾರ್ ಧರ್ಮಸೇನಾ ಅವರು ಆನ್-ಫೀಲ್ಡ್ ಅಂಪೈರ್ಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೊಂದಿಗೆ ಕ್ರಿಸ್ ಗಫಾನಿ ಟಿವಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದರೆ, ಪೌಲ್ ರೈಫೆಲ್ ಅವರು ನಾಲ್ಕನೇ ಅಂಪೈರ್ ಆಗಿರುತ್ತಾರೆ. ಫೈನಲ್ ಪಂದ್ಯದ ಮ್ಯಾಚ್ ರೆಫರಿಯಾಗಿ ಶ್ರೀಲಂಕಾದ ರಂಜನ್ ಮದುಗಲ್ಲೆ ಅವರು ಜವಾಬ್ದಾರಿವಹಿಸಲಿದ್ದಾರೆ.
ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ಮಳೆಯಿಂದ ಮೊಟಕುಗೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಪಂದ್ಯವು ವಾಶ್ ಔಟ್ ಆಗುವ ಸಂದರ್ಭದಲ್ಲಿ ಇದಕ್ಕಾಗಿ ಐಸಿಸಿ ಮೀಸಲು ದಿನವನ್ನು ಹೊಂದಿದೆ.