Yash dhull – ಚೊಚ್ಚಲ ರಣಜಿ ಪಂದ್ಯದಲ್ಲೇ ಚೊಚ್ಚಲ ಶತಕದ ಸವಿ ಸವಿ ನೆನಪು.. !
19 ವಯೋಮಿತಿ ವಿಶ್ವಕಪ್ ಟೂರ್ನಿಯ ವಿಶ್ವ ವಿಜೇತ ಕ್ಯಾಪ್ಟನ್ ಯಶ್ ಧುಲ್ ಅವರು ಚೊಚ್ಚಲ ರಣಜಿ ಪಂದ್ಯವನ್ನು ಸವಿ ಸವಿನೆನಪಾಗಿಸಿಕೊಂಡಿದ್ದಾರೆ.
ಗುವಾಹಟಿಯಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ದೆಹಲಿಯ ಯಶ್ ಧುಲ್ ಅವರು ಆಕರ್ಷಕ ಶತಕ ದಾಖಲಿಸಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದ ಯಶ್ ಧೂಳ್ ಅಮೋಘ ಆಟವನ್ನಾಡಿದ್ರು. ತಮಿಳುನಾಡು ಬೌಲಿಂಗ್ ದಾಳಿಗೆ ದಿಟ್ಟ ಉತ್ತರವನ್ನು ನೀಡಿದ ಯಶ್ ಧೂಳ್ ಅವರು 135 ಎಸೆತಗಳಲ್ಲಿ ಶತಕದ ಸಂಭ್ರಮವನ್ನಾಚರಿಸಿಕೊಂಡಿದ್ದಾರೆ.
ಚೊಚ್ಚಲ ರಣಜಿ ಪಂದ್ಯದಲ್ಲಿ ಚೊಚ್ಚಲ ಶತಕ ದಾಖಲಿಸುವ ಮೂಲಕ ಕ್ರಿಕೆಟ್ ದಿಗ್ಗಜರ ಸಾಲಿಗೂ ಸೇರಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ದೆಹಲಿ ತಂಡಕ್ಕೆ ಸಿಕ್ಕಿತ್ತು. ಆದ್ರೆ ದೆಹಲಿ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಧೃವ ಶೋರೈ ಒಂದು ರನ್ ಗಳಿಸಿದ್ರೆ, ಹಿಮ್ಮತ್ ಸಿಂಗ್ ಶೂನ್ಯ ಸುತ್ತಿದ್ರು. ಬಳಿಕ ನಿತೀಶ್ ರಾಣಾ ಅವರು 25 ರನ್ ಗಳಿಗೆ ಔಟಾದ್ರು. ಆಗ ದೆಹಲಿ ತಂಡ 67ಕ್ಕೆ 3.
ಹೀಗೆ ಸಂಕಷ್ಟಕ್ಕೆ ಸಿಲುಕಿದ್ದ ದೆಹಲಿ ತಂಡಕ್ಕೆ ಯಶ್ ಧುಲ್ ಆಧಾರವಾಗಿ ನಿಂತ್ರು. ನಾಲ್ಕನೇ ವಿಕೆಟ್ ಗೆ ಜಾಂಟಿ ಸಿಧು ಅವರೊಂದಿಗೆ ಅಜೇಯ ಶತಕದ ಜೊತೆಯಾಟವನ್ನಾಡುತ್ತಿದ್ದಾರೆ.
ಈ ಹಿಂದೆ 19 ವಯೋಮಿತಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಯಶ್ ಧುಲ್ ಅವರು ಶತಕ ದಾಖಲಿಸಿದ್ದರು. ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು.
ಇದೀಗ ರಣಜಿ ಟೂರ್ನಿಯಲ್ಲೂ ಅತ್ಯುತ್ತಮ ಫಾರ್ಮ್ ನಲ್ಲಿರುವ ಯಶ್ ಧುಲ್ ಭವಿಷ್ಯದ ಟೀಮ್ ಇಂಡಿಯಾ ಆಟಗಾರ ಅಂತನೇ ಬಿಂಬಿತವಾಗುತ್ತಿದ್ದಾರೆ. ಅಲ್ಲದೆ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಲಿದ್ದಾರೆ.