Ranji Trophy 2022- yash dhull – ಟೀಮ್ ಇಂಡಿಯಾದ ಭವಿಷ್ಯದ ಆಟಗಾರ ಯಶ್ ಧುಲ್ ..!
ಯಶ್ ಧುಲ್ …2022ರ ರಣಜಿ ಟೂರ್ನಿ ಆರಂಭಗೊಂಡ ಕೆಲವೇ ಕೆಲವು ಗಂಟೆಗಳಲ್ಲಿ ಸದ್ದು ಮಾಡಿದ ಹುಡುಗ.
ಹೌದು, ದೆಹಲಿ ತಂಡದ ಯಶ್ ಧುಲ್ ತಮಿಳುನಾಡು ವಿರುದ್ದದ ಮೊದಲ ಪಂದ್ಯವೇ ಚೊಚ್ಚಲ ರಣಜಿ ಪಂದ್ಯ. ತಮಿಳುನಾಡು ಬೌಲರ್ ಗಳು ಆರಂಭದಲ್ಲೇ ಆಘಾತದ ಮೇಲೆ ಆಘಾತ ನೀಡಿದ್ರು. ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದೆಹಲಿ ತಂಡಕ್ಕೆ ಯಶ್ ಧೂಳ್ ಆಧಾರಸ್ತಂಭವಾಗಿ ನಿಂತ್ರು.
ತಮಿಳುನಾಡು ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಯಶ್ ನೋಡ ನೋಡುತ್ತಲೇ ಶತಕದ ಸಂಭ್ರಮದಲ್ಲಿ ತೇಲಾಡಿದ್ರು. 57 ಎಸೆತಗಳಲ್ಲಿ ಅರ್ಧಶತಕ, 135 ಎಸೆತಗಳಲ್ಲಿ ಶತಕ ದಾಖಲಿಸಿದ್ದ ಯಶ್ ಧೂಳ್ ಅಂತಿಮವಾಗಿ 150 ಎಸೆತಗಳಲ್ಲಿ 18 ಬೌಂಡರಿಗಳ ಸಹಾಯದಿಂದ 113 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕನಾಗಿದ್ದ ಯಶ್ ಧುಲ್ ಅವರು, ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ದಾಖಲಿಸಿದ್ದರು.
ಇದೀಗ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ದಾಖಲಿಸಿ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ಅಮೋಲ್ ಮಜುಂದಾರ್ ಮೊದಲಾದ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಿಕೊಂಡಿದ್ದಾರೆ.
ಇನ್ನೊಂದು ವಿಶೇಷತೆ ಅಂದ್ರೆ, 19 ವಯೋಮಿತಿ ವಿಶ್ವಕಪ್ ತಂಡದ ನಾಯಕನಾಗಿದ್ದವರು ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ದಾಖಲಿಸಿದವರ ಸಾಲಿಗೂ ಯಶ್ ಧುಲ್ ಸೇರಿಕೊಂಡಿದ್ದಾರೆ.
ಈ ಹಿಂದೆ, ಪೃಥ್ವಿ ಶಾ, ಪ್ರಿಯಾಂಕ್ ಗರ್ಗ್ ತಮ್ಮ ಚೊಚ್ಚಲ ರಣಜಿ ಪಮದ್ಯದಲ್ಲಿ ಶತಕ ದಾಖಲಿಸಿದ್ದರು. Ranji Trophy 2022 – Yash Dhull joins Sachin Tendulkar, Rohit Sharma in elite list
19 ವಯೋಮಿತಿ ವಿಶ್ವಕಪ್ ಟೂರ್ನಿಯ ವೇಳೆ ಯಶ್ ಧುಲ್ ಕೋವಿಡ್ ಸೋಂಕಿನಿಂದಲೂ ಬಳಲಿದ್ದರು. ನಂತರ ಚೇತರಿಸಿಕೊಂಡು ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದರು. ಆಡಿರುವ ನಾಲ್ಕು ಪಂದ್ಯಗಳಲ್ಲಿ 224 ರನ್ ದಾಖಲಿಸಿದ್ದರು. 19 ವಯೋಮಿತಿ ವಿಶ್ವಕಪ್ ಗೆ ಮುನ್ನ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಇದೀಗ ಮುಂಬರುವ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಯಶ್ ಧುಲ್ ಅವರನ್ನು 50 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು.
ಒಟ್ಟಿನಲ್ಲಿ ಯಶ್ ಧುಲ್ ಈಗಾಗಲೇ ಸಾಕಷ್ಟು ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ಟೀಮ್ ಇಂಡಿಯಾ ಆಟಗಾರನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ರೆ ಮುಂದಿನ ಪಂದ್ಯಗಳಲ್ಲೂ ಸ್ಥಿರ ಪ್ರದರ್ಶನ ನೀಡಲೇಬೇಕು. ಯಾಕಂದ್ರೆ ಇದು ಆರಂಭ. ಮುಂದೆ ಸಾಗುವ ಹಾದಿ ಇನ್ನೂ ಇದೆ. ಹೀಗಾಗಿ ಪ್ರತಿ ಹೆಜ್ಜೆಯನ್ನು ಎಚ್ಚರದಿಂದ ಇಡಲೇಬೇಕು.