Women’s T20 World Cup: ಫೆಬ್ರವರಿ 12ರಂದು ಭಾರತ-ಪಾಕ್ ಫೈಟ್, ವೇಳಾಪಟ್ಟಿ ಬಿಡುಗಡೆ
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023 ಮಹಿಳಾ ಟಿ-20 ವಿಶ್ವಕಪ್‌ನ ವೇಳಾಪಟ್ಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿ ಆಗಲಿವೆ. ಫೆಬ್ರವರಿ 12, 2023 ರಂದು, ಉಭಯ ತಂಡಗಳು ಕೇಪ್ ಟೌನ್‌ನಲ್ಲಿ ಕಾದಾಡಲಿವೆ.
ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ 8 ನೇ ಆವೃತ್ತಿಯು 10 ಫೆಬ್ರವರಿ 2023 ರಂದು ಆರಂಭವಾಗಲಿದೆ. ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಟೂರ್ನಿ ಪ್ರಾರಂಭವಾಗುತ್ತದೆ. ಪಂದ್ಯಾವಳಿಯು ದಕ್ಷಿಣ ಆಫ್ರಿಕಾದ ಮೂರು ನಗರಗಳಲ್ಲಿ ಕೇಪ್ ಟೌನ್, ಪರ್ಲ್ ಮತ್ತು ಗ್ಕೆಬೆರಾದಲ್ಲಿ ನಡೆಯಲಿದೆ. ಫೆಬ್ರವರಿ 23 ರಿಂದ ನಾಕೌಟ್ ಪಂದ್ಯಗಳು ಆರಂಭವಾಗಲಿವೆ. ಸೆಮಿಫೈನಲ್ ಮತ್ತು ಫೈನಲ್ ಎರಡೂ ಕೇಪ್ ಟೌನ್ ನಲ್ಲಿ ನಡೆಯಲಿವೆ. 26 ಫೆಬ್ರವರಿ 2023 ರಂದು ಕೇಪ್ ಟೌನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಫೆಬ್ರವರಿ 27 ಅನ್ನು ಕಾಯ್ದಿರಿಸಿದ ದಿನವನ್ನು ಇಡಲಾಗಿದೆ.
ಐದು ಬಾರಿ ವಿಜೇತರು ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವು ನ್ಯೂಜಿಲೆಂಡ್ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾದೊಂದಿಗೆ ಗುಂಪು ಎ ರಲ್ಲಿ ಸ್ಥಾನ ಪಡೆದಿವೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಗುಂಪು ಎ ರಲ್ಲಿವೆ. ಬಾಂಗ್ಲಾದೇಶ ಇತ್ತೀಚೆಗೆ ಐರ್ಲೆಂಡ್ ಅನ್ನು ಸೋಲಿಸುವ ಮೂಲಕ ಮಹಿಳಾ ಟಿ-20 ವಿಶ್ವಕಪ್ ಕ್ವಾಲಿಫೈಯರ್ 2022 ಫೈನಲ್ ಅನ್ನು ಗೆದ್ದುಕೊಂಡಿತು. ಐರ್ಲೆಂಡ್ ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನದೊಂದಿಗೆ ಗುಂಪು 2 ರಲ್ಲಿದೆ.
Women’s T20 World Cup, schedule, South Africa, India