ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ (Women’s IPL ) ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಮುಂದಿನ ವರ್ಷ ನಡೆಯುವ ಮಹಿಳಾ ಟಿ20 ವಿಶ್ವಕಪ್ (Women’s T20 Worldcup) ಬಳಿಕ ಭಾರತದಲ್ಲಿ ಮಹಿಳಾ ಐಪಿಎಲ್ ನಡೆಯಲಿದೆ (First season in 2023). ವರದಿಗಳ ಪ್ರಕಾರ ಬಿಸಿಸಿಐ ಚೊಚ್ಚಲ ಆವೃತ್ತಿಗೆ 5 ತಂಡಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗಿದೆ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಂಕಪಟ್ಟಿಯ ಅಗ್ರ ಎರಡು ತಂಡಗಳು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿವೆ. ಮೂರು ಮತ್ತು 4ನೇ ಸ್ಥಾನ ಪಡೆಯುವ ತಂಡಗಳ ನಡುವೆ 3ನೇ ಸ್ಥಾನಕ್ಕಾಗಿ ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಮಹಿಳಾ ಐಪಿಎಲ್ನಲ್ಲಿ ಪ್ರತಿ ತಂಡವು ಐದು ವಿದೇಶಿ ಆಟಗಾರ್ತಿಯರನ್ನು (Foreign Players) ಕಣಕ್ಕಿಳಿಸಬಹುದು. ಆದರೆ ವಿದೇಶಿ ಆಟಗಾರ್ತಿಯರ ಪೈಕಿ ನಾಲ್ವರು ಐಸಿಸಿ ಫುಲ್ ಮೆಂಬರ್ ತಂಡದವರೇ ಆಗಿರಬೇಕು. ಬಿಸಿಸಿಐ (BCCI plan) 5ತಂಡಗಳ ಆಯ್ಕೆಯ ಬಗ್ಗೆ ಹಲವು ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇದೆ. ಧರ್ಮಶಾಲಾ ಮತ್ತು ಜಮ್ಮು ಒಳಗೊಂಡ ಉತ್ತರ ವಲಯ, ಕೊಚ್ಚಿನ್ ಮತ್ತು ವೈಝಾಗ್ ಒಳಗೊಂಡ ದಕ್ಷಿಣ ವಲಯ, ಇಂಧೋರ್, ನಾಗ್ಪುರ ಮತ್ತು ರಾಯ್ಪುರ ಒಳಗೊಂಡ ಕೇಂದ್ರವಲಯ, ರಾಂಚಿ, ಕಟಕ್ ಒಳಗೊಂಡ ಪೂರ್ವವಲಯ ಮತ್ತು ಗುವಾಹಟಿ, ಪುಣೆ ಮತ್ತು ರಾಜ್ಕೋಟ್ ಒಳಗೊಂಡ ಪಶ್ಚಿಮ ವಲಯದ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಅಹ್ಮದಾಬಾದ್, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೊಲ್ಕತ್ತಾ ಮಹಿಳಾ ಐಪಿಎಲ್ಗೆ ಆತಿಥ್ಯ ನೀಡಲಿದೆ. ಆದರೆ ಬಿಸಿಸಿಐ ಆಡಳಿತ ಮಂಡಳಿಯಲ್ಲಿ ಮಹಿಳಾ ಐಪಿಎಲ್ ಬಗ್ಗೆ ಅಂತಿಮ ತೀರ್ಮಾನ ಹೊರಬರಬೇಕಿದೆ.