Wimbledon 2022- ಮೊದಲ ಸುತ್ತಿನಲ್ಲೇ ಸೆರೆನಾ ವಿಲಿಯಮ್ಸ್ ಗೆ ಸೋಲು…!

ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸು ಮತ್ತೆ ಭಗ್ನಗೊಂಡಿದೆ. 40ರ ಹರೆಯದಲ್ಲೂ ಅದ್ಭುತ ಆಟವನ್ನಾಡುವ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಆಟಗಾರ್ತಿಗೆ ಮತ್ತೆ ನಿರಾಸೆಯಾಗಿದೆ.
ಹೌದು, ಅಮೆರಿಕಾದ ಚಾಂಪಿಯನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು 5-7, 6-1, 6-7ರಿಂದ ಫ್ರಾನ್ಸ್ ನ ಹರ್ಮೊನಿ ಥನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಅಂದ ಹಾಗೇ ಸೆರೆನಾ ವಿಲಿಯಮ್ಸ್ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಸತತವಾಗಿ ಎರಡನೇ ಬಾರಿ ಮೊದಲ ಸುತ್ತಿನಲ್ಲೇ ಹೊರ ನಡೆದಿದ್ದಾರೆ. Wimbledon 2022- Serena Williams STUNNED by Tan in first-round
ಅಷ್ಟಕ್ಕೂ ಸೆರೆನಾ ವಿಲಿಯಮ್ಸ್ ಸೋತಿರುವುದರಲ್ಲಿ ಅಚ್ಚರಿ ಪಡುವಂತಹುದ್ದೇನು ಇಲ್ಲ. ಯಾಕಂದ್ರೆ ಕಳೆದ ಒಂದು ವರ್ಷದಿಂದ ಅವರು ಟೆನಿಸ್ ಅಂಗಣದಿಂದ ದೂರವೇ ಉಳಿದಿದ್ದರು. ಗಾಯದಿಂದ ಚೇತರಿಸಿಕೊಂಡಿದ್ದ ಸೆರೆನಾ ವಿಲಿಯಮ್ಸ್ ಅವರು ಕಳೆದ ಒಂದು ವರ್ಷದಿಂದ ಯಾವುದೇ ಟೂರ್ನಿಗಳಲ್ಲೂ ಆಡಿರಲಿಲ್ಲ. ಹೀಗಾಗಿ ಸರೆನಾ ವಿಲಿಯಮ್ಸ್ ಆಟದಲ್ಲಿ ಈ ಹಿಂದಿನ ಮೊನಚು ಕಾಣುತ್ತಿರಲಿಲ್ಲ.
23 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೆರೆನಾ ವಿಲಿಯಮ್ಸ್ 2017ರ ನಂತರ ಯಾವುದೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದಿಲ್ಲ. 2017ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಇಲ್ಲಿಯವರೆಗೆ ಸೆರೆನಾ ವಿಲಿಯಮ್ಸ್ ಅವರು ಏಳು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅದೇ ರೀತಿ ಏಳು ಬಾರಿ ಆಸ್ಟ್ರೇಲಿಯನ್ ಓಪನ್, ಮೂರು ಬಾರಿ ಫ್ರೆಂಚ್ ಓಪನ್, ಆರು ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.