ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎಡ್ಜ್ ಬಾಸ್ಟನ್ ಟೆಸ್ಟ್ನಲ್ಲಿ ಸೋಲು ಗೆಲುವಿನ ಬಗ್ಗೆ ಎಷ್ಟು ಕುತೂಹಲವಿದೆಯೋ ಅಷ್ಟೇ ಇಂಟರೆಸ್ಟಿಂಗ್ ಕೊಹ್ಲಿಯ ಶತಕದ ಬಗ್ಗೆ ಇದೆ. ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆ ಮೇಲೆ ದಾಖಲೆ ಬರೆದಿದ್ದ ವಿರಾಟ್ ಈಗ ಶತಕದ ಬರ ಎದುರಿಸುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿಲ್ಲವಾದರೂ ಶತಕ ಮಾತ್ರ ಸಿಡಿಸುತ್ತಿಲ್ಲ.
ವಿರಾಟ್ ತನ್ನ ಕಟ್ಟ ಕಡೆಯ ಅಂತರಾಷ್ಟ್ರೀಯ ಶತಕ ಸಿಡಿಸಿದ್ದು ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ 2019ರ ನವೆಂಬರ್ನಲ್ಲಿ ವಿರಾಟ್ ಬಾಂಗ್ಲಾದೇಶ ವಿರುದ್ಧ ಟೆಸ್ಟ್ನಲ್ಲಿ ಶತಕ ಸಿಡಿಸಿದ್ದರು. ಅದು ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ 70ನೇ ಶತಕವಾಗಿತ್ತು. ಆದರೆ ಆ ಬಳಿಕ ಇಲ್ಲಿ ತನಕ ಒಂದೇ ಒಂದು ಶತಕ ಸಿಡಿಸಿಲ್ಲ. ಎರಡೂವರೆ ವರ್ಷದಿಂದ ವಿರಾಟ್ ಶತಕ ಬಾರಿಸಿಲ್ಲ ಅನ್ನುವುದು ಅಚ್ಚರಿಯಾದರೂ ಸತ್ಯ.
ಕೊಲ್ಕತ್ತಾ ಶತಕದ ಬಳಿಕ ಕೊಹ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಗರಿಷ್ಠ ರನ್ 79. 21 ಏಕದಿನ ಪಂದ್ಯಗಳನ್ನಾಡಿದ್ದರೂ ಗರಿಷ್ಠ ಸ್ಕೋರ್ 89. 25 ಟಿ20 ಪಂದ್ಯಗಳನ್ನಾಡಿದರೂ ಗರಿಷ್ಠ ಸ್ಕೋರ್ 94 ಮಾತ್ರ ಆಗಿದೆ. ಶತಕ ವೀರ ವಿರಾಟ್ ಪಾಲಿಗೆ ಸದ್ಯ ಶತಕವೇ ಮರೀಚಿಕೆ ಆಗಿದೆ.
ಬರ್ಮಿಂಗ್ ಹ್ಯಾಂನಲ್ಲಿ ವಿರಾಟ್ ಶತಕ ಸಿಡಿಸ್ತಾರೆ ಅನ್ನುವ ನಿರೀಕ್ಷೆ ಇದೆ. ಕಳೆದ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಉತ್ತಮ ಆಟ ಆಡಿದ್ದರು. ಆದರೆ ಶತಕ ಸಿಡಿಸಿರಲಿಲ್ಲ. ಈ ಸಿಕ್ಕಿರುವ ಅವಕಾಶಗಳನ್ನು ವಿರಾಟ್ ಬಳಸಿಕೊಳ್ಳುತ್ತಾರೆ ಅನ್ನುವ ನಂಬಿಕೆ ಅಭಿಮಾನಿಗಳದ್ದು. ವಿರಾಟ್ ಆಟಕ್ಕೆ ಬರ್ಮಿಂಗ್ ಹ್ಯಾಂನಲ್ಲಿ ಇಂಗ್ಲೆಂಡ್ ಬರ್ನ್ ಆಗುತ್ತೆ ಅನ್ನುವ ನಂಬಿಕೆ ಅಭಿಮಾನಿಗಳದ್ದು.