ಗಾಲೆ ಟೆಸ್ಟ್ನ 2ನೇ ದಿನ ಶ್ರೀಲಂಕಾ ಪ್ರವಾಸಿ ಆಸ್ಟ್ರೇಲಿಯಾಕ್ಕೆ ಸ್ಪಿನ್ ಬಲೆ ಹೆಣೆದು ಬೃಹತ್ ಮೊತ್ತ ದಾಖಲಿಸುವುದನ್ನು ತಪ್ಪಿಸಿದು. ಆದರೆ ಓಪನರ್ ಉಸ್ಮಾನ್ ಖವಾಜ, ಆಲ್ರೌಂಡರ್ ಕೆಮರೂನ್ ಗ್ರೀನ್ ಮತ್ತು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಆಕರ್ಷಕ ಬ್ಯಾಟಿಂಗ್ ನಡೆಸಿ ಆಸೀಸ್ಗೆ 2ನೇ ದಿನ 101 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಟ್ಟಿದ್ದಾರೆ.
2ನೇ ದಿನ ಆಟ ಆರಂಭಿಸಿದ ಆಸ್ಟ್ರೇಲಿಯಾ ಆರಂಭದಲ್ಲೇ 6 ರನ್ಗಳಿಸಿದ್ದ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಓಪನರ್ ಖವಾಜ ಜೊತೆ ಸೇರಿದ ಕೆಮರೂನ್ ಗ್ರೀನ್ ವೇಗವಾಗಿ ರನ್ಗಳಿಸುವ ಕಡೆ ಗಮನ ಕೊಟ್ಟರು. ಈ ಜೋಡಿಯ ನಡುವೆ 57 ರನ್‌ಗಳ ಜೊತೆಯಾಟ ಬಂತು. ಈ ಹಂತದಲ್ಲಿ 71 ರನ್ಗಳಿಸಿದ್ದ ಖವಾಜ ವಾಂಡರ್ಸೆ ಎಸೆತದಲ್ಲಿ ಲೆಕ್ಕಾಚಾರ ತಪ್ಪಿದರು.
ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ನಡುವೆ ಮತ್ತೊಂದು ಜೊತೆಯಾಟ ಬಂತು. 84 ರನ್‌ಗಳ ಈ ಜೊತೆಯಾಟ ಆಸ್ಟ್ರೇಲಿಯಾದ ಮೇಲುಗೈಗೆ ಕಾರಣವಾಗಿತ್ತು. 47 ಎಸೆತಗಳಲ್ಲಿ 45 ರನ್ಗಳಿಸಿದ್ದ ಕ್ಯಾರಿ ಮೆಂಡಿಸ್ ಸ್ಪಿನ್ ಬಲೆಗೆ ಬಿದ್ದರು. 77 ರನ್ಗಳಿಸಿದ್ದ ಗ್ರೀನ್ ಕೂಡ ದಿನದ ಕೊನೆಯ ಹಂತದಲ್ಲಿ ಔಟಾದರು. ಮಿಚೆಲ್ ಸ್ಟಾರ್ಕ್ ಕೇವಲ 10 ರನ್‌ಗಳ ಕಾಣಿಕೆ ನೀಡಿದರು.
ಆಸೀಸ್ನ ದಿಢೀರ್ ಕುಸಿತದ ನಡುವೆ ಪ್ಯಾಟ್ ಕಮಿನ್ಸ್ ಮಿಂಚಿನ ಆಟ ಆಡಿದರು. ದಿನದ ಅಂತ್ಯಕ್ಕೆ 16 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಫೋರ್ ನೆರವಿನಿಂದ 26 ರನ್ಗಳಿಸಿರುವ ಕಮಿನ್ಸ್ ಮತ್ತು 8 ರನ್ಗಳಿಸಿರುವ ನೇಥನ್ ಲಯನ್ 3ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 313 ರನ್ಗಳಿಸಿದೆ. 101 ರನ್‌ಗಳ ಮುನ್ನಡೆ ಸಾಧಿಸಿರುವ ಕಾಂಗರೂ ತಂಡ ಕೊಂಚ ಮಟ್ಟಿನ ಮೇಲುಗೈ ಸಾಧಿಸಿದೆ.