ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ಪ್ರಾಬಲ್ಯ ಮುಂದುವರಿದಿದೆ. ಈಗಾಗಲೇ ಪ್ರಶಸ್ತಿ ಗೆಲ್ಲುವ ಫೇವರೆಟ್ ಎನಿಸಿರುವ ಆಸೀಸ್, ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದ ಆಸೀಸ್, ಮತ್ತೊಂದು ಸುಲಭದ ಗೆಲುವು ಸಾಧಿಸಿತು. ವಿಂಡೀಸ್ ಪಡೆಯನ್ನ 131 ರನ್ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಆಸ್ಟ್ರೇಲಿಯಾ, 30.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಅಂಕಪಟ್ಟಿಯಲ್ಲಿ 8 ಪಾಯಿಂಟ್ಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿದೆ.
ಆಸೀಸ್ ಮಾರಕ ಬೌಲಿಂಗ್
ಟಾಸ್ ಸೋತು ಮೊದಲು ಬೌಲಿಂಗ್ ಅವಕಾಶ ಪಡೆದ ಆಸ್ಟ್ರೇಲಿಯಾ ಪಂದ್ಯದ ಆರಂಭದಿಂದಲೇ ಮೇಲುಗೈ ಸಾಧಿಸಿತು. ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಿದ ಎಲ್ಲಿಸ್ ಪೆರ್ರಿ 8 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ಆಶ್ಲೀ ಗಾರ್ಡ್ನರ್ 10 ಓವರ್ಗಳಲ್ಲಿ 25 ರನ್ಗಳಿಗೆ 3 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜೆಸ್ ಜೊನಾಸೆನ್ 2 ಹಾಗೂ ಮೇಗನ್ ಶುಟ್ 1 ವಿಕೆಟ್ ಪಡೆಯುವ ಮೂಲಕ ವಿಂಡೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು.
ನಾಯಕಿಯ ಏಕಾಂಗಿ ಆಟ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ಮಹಿಳೆಯರು ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದರು. ಆದರೆ ಜವಾಬ್ದಾರಿಯ ಆಟವಾಡಿದ ನಾಯಕಿ ಸ್ಟಾಫಾನಿ ಟೇಲರ್(50) ಅರ್ಧಶತಕ ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ಬಂದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ ವೆಸ್ಟ್ ಇಂಡೀಸ್ 45.5 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟ್ ಆಯಿತು.
ರಾಚೆಲ್ ಹೇನ್ಸ್ ಭರ್ಜರಿ ಬ್ಯಾಟಿಂಗ್
ವೆಸ್ಟ್ ಇಂಡೀಸ್ ನೀಡಿದ ಸುಲಭದ ಸವಾಲು ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ರಾಚೆಲ್ ಹೇನ್ಸ್(83*) ಸುಲಭದ ಗೆಲುವು ತಂದುಕೊಟ್ಟರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹೇನ್ಸ್, ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಬೆತ್ ಮೋನಿ(28*) ತಂಡದ ಗೆಲುವಿಗೆ ನೆರವಾದರು. ಉಳಿದಂತೆ ಅಲಿಸ್ಸಾ ಹೀಲಿ(3), ನಾಯಕಿ ಮೆಗ್ ಲ್ಯಾನಿಂಗ್(0) ಹಾಗೂ ಎಲ್ಲಿಸ್ ಪೆರ್ರಿ(10) ರನ್ಗಳಿಸಿದರು.