ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಈಗ ಹಣೆಬರಹ ನಿರ್ಧಾರ ಮಾಡುವ ಪಂದ್ಯಗಳು ನಡೆಯುತ್ತಿವೆ. ಹಾಲಿ ರನ್ನರ್ ಅಪ್ ಭಾರತ ಮತ್ತು ಹಾಲಿ ಚಾಂಪಿಯನ್ ಇಂಗ್ಲೆಂಡ್ ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತಿವೆ. ಮೌಂಟ್ ಮಂಗ್ನುಯಿಯಲ್ಲಿ ಕಳೆದ ಬಾರಿಯ ಫೈನಲಿಸ್ಟ್ಗಳು ಮುಖಾಮುಖಿಯಾಗುತ್ತಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ಪ್ರದರ್ಶನ ಈ ಬಾರಿ ವಿಭಿನ್ನವಾಗಿದೆ. ಭಾರತ ಆಡಿರುವ 3 ಪಂದ್ಯಗಳಲ್ಲಿ 2 ನ್ನು ಗೆದ್ದು ಸೆಮಿಫೈನಲ್ ಲೆಕ್ಕಾಚಾರದಲ್ಲಿದೆ. ಇಂಗ್ಲೆಂಡ್ ಆಡಿರುವ ಮೂರೂ ಪಂದ್ಯಗಳನ್ನು ಸೋತು ಕಂಗಾಲಾಗಿದೆ. ಭಾರತದ ವಿರುದ್ಧದ ಪಂದ್ಯವನ್ನು ಗೆದ್ದರೆ ಮಾತ್ರ ಇಂಗ್ಲೆಂಡ್ ಟೂರ್ನಿಯಲ್ಲಿ ಉಳಿಯಬಹುದು. ಅಷ್ಟೇ ಅಲ್ಲ ಉಳಿದಿರುವ ನಾಲ್ಕೂ ಪಂದ್ಯಗಳನ್ನು ಇಂಗ್ಲೆಂಡ್ ಗೆಲ್ಲಬೆಕಿದೆ. ಮತ್ತೊಂದು ಕಡೆಯಲ್ಲಿ ಭಾರತ ಆದಷ್ಟು ಬೇಗನೆ ಸೆಮಿಫೈನಲ್ ಸ್ಥಾನ ಗಟ್ಟಿಮಾಡಿಕೊಂಡು ಒತ್ತಡ ದೂರ ಮಾಡಿಕೊಳ್ಳಬೇಕಿದೆ.
ಭಾರತ ಪಾಕಿಸ್ತಾನ ಮತ್ತು ವೆಸ್ಟ್ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಕಂಡಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಭಾರತದ ಬ್ಯಾಟಿಂಗ್ ಶಕ್ತಿ ಸೂಪರ್ ಆಗಿ ಕಾಣುತ್ತಿದೆ. ಸ್ಮೃತಿ ಮಂದಾನಾ, ಮತ್ತು ಯಸ್ತಿಕಾ ಭಾಟಿಯಾ ಬಿರುಸಿನ ಆರಂಭ ತಂದುಕೊಡುತ್ತಿದ್ದಾರೆ. ದೀಪ್ತಿ ಶರ್ಮಾ ಮತ್ತು ಮಿಥಾಲಿ ರಾಜ್ ತಂಡಕ್ಕೆ ಸ್ಥಿರತೆ ತಂದುಕೊಡುತ್ತಿದ್ದಾರೆ. ಹರ್ಮನ್ ಪ್ರಿತ್ ಕೌರ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಸ್ಲಾಗ್ ಓವರುಗಳ ಸ್ಪೆಷಲಿಸ್ಟ್ಗಳು. ಜುಲಾನ್ ಗೋಸ್ವಾಮಿ, ಮೇಘನಾ ಸಿಂಗ್ ವೇಗದ ಬೌಲಿಂಗ್ ಹೊಣೆ ಹೊತ್ತಿದ್ದಾರೆ. ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಾರ್ಕರ್ ಆಲ್ರೌಂಡರ್ಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ರಾಜೇಶ್ವರಿ ಗಾಯಕ್ವಾಡ್ ಸ್ಪಿನ್ ಬೌಲಿಂಗ್ ಕೂಡ ತಂಡದ ಶಕ್ತಿಯಾಗಿದೆ.
ಇಂಗ್ಲೆಂಡ್ ಆಡಿರುವ ಎಲ್ಲಾ ಪಂದ್ಯಗಳನ್ನು ಸೋತು ಕಂಗೆಟ್ಟರೂ ಸಾಧಾರಾಣಾ ತಂಡವಲ್ಲ. ಟಾಮಿ ಬಿಮೌಂಟ್, ನ್ಯಾಟ್ ಸೀವಿರ್, ಹೀದರ್ ನೈಟ್, ಏಮಿ ಜೋನ್ಸ್ ರಂತಹ ಬ್ಯಾಟರ್ಗಳಿದ್ದಾರೆ. ಆನ್ಯ ಶ್ರಬ್ಸೋಲ್, ಸೋಫಿ ಎಕ್ಲಸ್ಟೋನ್, ಕೆಥರಿನ್ ಬ್ರಂಟ್ರಂತಹ ಬೌಲರ್ಗಳಿದ್ದಾರೆ. ಇದಲ್ಲದೆ ಇಂಗ್ಲೆಂಡ್ಗೆ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಹಾಲಿ ಚಾಂಪಿಯನ್ ಮತ್ತು ರನ್ನರ್ ಅಪ್ಗಳ ಕದನ ಕುತೂಹಲ ಕೆರಳಿಸಿದೆ.