ಪ್ರವಾಸಿ ಬಾಂಗ್ಲಾದೇಶ(Bangladesh) ವಿರುದ್ಧ ODI ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತ ಕಂಡಿರುವ ವೆಸ್ಟ್ ಇಂಡೀಸ್(West Indies) ಜುಲೈ 22ರಿಂದ ಆರಂಭವಾಗುವ ಭಾರತ(India) ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ODI ಸರಣಿಗಾಗಿ ವಿಂಡೀಸ್ ತಂಡದ ಆಲ್ರೌಂಡರ್ ಜೇಸನ್ ಹೋಲ್ಡರ್(Jason Holder) ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.
ವಿಂಡೀಸ್ ತಂಡದ ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್, ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಹೋಲ್ಡರ್ ಅನುಪಸ್ಥಿತಿ ಬಹುವಾಗಿ ಕಾಡಿತ್ತು. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಬಲವನ್ನ ಹೆಚ್ಚಿಸುವ ಉದ್ದೇಶದಿಂದ ಜೇಸನ್ ಹೋಲ್ಡರ್ ಅವರನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್, 13 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಜೇಸನ್ ಹೋಲ್ಡರ್ ತಂಡಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಮುಖ ಆಯ್ಕೆಗಾರ ಡೆಸ್ಮಂಡ್ ಹೇನ್ಸ್, ನಮಗೆ ತಿಳಿದಂತೆ ಜೇಸನ್ ವಿಶ್ವದ ಪ್ರಮುಖ ಆಲ್ರೌಂಡ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರನ್ನು ತಂಡಕ್ಕೆ ಮರಳಿ ಪಡೆದಿರುವುದಕ್ಕೆ ನಮಗೆ ಸಂತೋಷವಾಗಿದೆ. ಅವರು ರಿಫ್ರೆಶ್ ಆಗುತ್ತಾರೆ, ಹೊಸ ಉತ್ಸಾಹದಿಂದ ತಂಡಕ್ಕೆ ಮರಳಲಿದ್ದು, ಮೈದಾನದ ಒಳಗೆ ಮತ್ತು ಹೊರಗೆ ಹೋಲ್ಡರ್ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗಯಾನಾದಲ್ಲಿ ಬಾಂಗ್ಲಾ ವಿರುದ್ಧ ಅತ್ಯಂತ ಸವಾಲಿನ ಮೂರು ಪಂದ್ಯಗಳನ್ನು ಆಡಿದ್ದೇವೆ. ಇದೀಗ ಟ್ರಿನಿಡಾಡ್ನಲ್ಲಿ ಭಾರತವನ್ನು ಎದುರಿಸಲು ಸಜ್ಜಾಗಿದ್ದು, ಸಾಂಘಿಕ ಆಟದ ಮೂಲಕ ಟೀಂ ಇಂಡಿಯಾವನ್ನ ಎದುರಿಸಬೇಕಿದೆ ಎಂದಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಭಾರತ ವಿರುದ್ಧದ ಮೂರು ಪಂದ್ಯಗಳ ODI ಸರಣಿಯು ಜುಲೈ 22, 24 ಮತ್ತು 27 ರಂದು ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ನಡೆಯಲಿದೆ. ODI ಸರಣಿಯ ನಂತರ ಐದು ಪಂದ್ಯಗಳ T20I ಸರಣಿ ಜುಲೈ 29 ಮತ್ತು ಆಗಸ್ಟ್ 7ರ ನಡುವೆ ನಿಗದಿಪಡಿಸಲಾಗಿದೆ.