Yuvaraj Singh – Rishab Pant – 45 ನಿಮಿಷಗಳ ಈ ಸಂಭಾಷಣೆ ಅರ್ಥಪೂರ್ಣವಾಗಿತ್ತು

ಈ ಶತಕವನ್ನು ನಾನು ಜೀವನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಪ್ರತಿ ಎಸೆತಗಳನ್ನು ಗಮನದಲ್ಲಿಟ್ಟುಕೊಂಡು ಆಡಿದ್ದೇನೆ. ತಂಡ ಒತ್ತಡದಲ್ಲಿರುವಾಗ ಈ ರೀತಿಯಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಹೌದು, ರಿಷಬ್ ಪಂತ್ ಪ್ರಬುದ್ಧತೆಯನ್ನು ಸಾಧಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿಯನ್ನು ಅರಿತುಕೊಂಡು ಬ್ಯಾಟಿಂಗ್ ಮಾಡಬೇಕು ಎಂಬುದು ಅವರಿಗೆ ಮನವರಿಕೆಯಾಗಿದೆ. ಹೀಗಾಗಿಯೇ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಜೊತೆಗೆ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕವನ್ನು ದಾಖಲಿಸಿದ್ದಾರೆ.

ಆದ್ರೆ ರಿಷಬ್ ಪಂತ್ ಆಟದ ಹಿಂದೆ ಮಾಜಿ ಆಟಗಾರರ ಕೈವಾಡವೂ ಇದೆ. ಹೆಡ್ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ಒಡನಾಡಿ ಹಾರ್ದಿಕ್ ಪಾಂಡ್ಯ ಹೀಗೆ ಎಲ್ಲರೂ ಕೂಡ ರಿಷಬ್ ಪಂತ್ ಗೆ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದ್ದಾರೆ.
ಈ ನಡುವೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸತತವಾಗಿ ರಿಷಬ್ ಪಂತ್ ಗೆ ಸಲಹೆಗಳನ್ನು ನೀಡುತ್ತಲೇ ಬಂದಿದ್ದಾರೆ. ಏತನ್ಮದ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ರಿಷಬ್ ಪಂತ್ ಜೊತೆ ಚಾಟ್ ಮಾಡಿದ್ದಾರೆ.

ಮೂರನೇ ಪಂದ್ಯಕ್ಕೂ ಮುನ್ನ ರಿಷಬ್ ಪಂತ್ ಜೊತೆ ಯುವರಾಜ್ ಸಿಂಗ್ ಸುಮಾರು 45 ನಿಮಿಷಗಳ ಚಾಟಿಂಗ್ ಮಾಡಿದ್ದಾರೆ. ಅಲ್ಲದೆ ರಿಷಬ್ ಪಂತ್ ಗೆ ಕೆಲವೊಂದು ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಯುವರಾಜ್ ಸಿಂಗ್ ಅವರೇ ಬಹಿರಂಗಪಡಿಸಿದ್ದಾರೆ.
45 ನಿಮಿಷಗಳ ಸಂಭಾಷಣೆಗೆ ಅರ್ಥಪೂರ್ಣ ಪ್ರತಿಫಲ ಸಿಕ್ಕಿದೆ. ರಿಷಬ್ ಪಂತ್ ಅದ್ಭುತವಾಗಿ ಆಡಿದ್ದೀರಿ. ನಿಮ್ಮ ಮತ್ತು ಹಾರ್ದಿಕ್ ಪಾಂಡ್ಯ ಅವರ ಇನಿಂಗ್ಸ್ ನೋಡಲು ತುಂಬಾನೇ ಸೊಗಸಾಗಿತ್ತು ಎಂದು ಯುವರಾಜ್ ಸಿಂಗ್ ಟ್ವಿಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಟೀಮ್ ಇಂಡಿಯಾ ಕಂಡ ಅತ್ಯದ್ಭುತ ಆಲ್ ರೌಂಡರ್. 2007ರ ಟಿ-20 ಮತ್ತು 2011ಏಕದಿನ ವಿಶ್ವಕಪ್ ಗೆಲ್ಲಲು ಯುವರಾಜ್ ಸಿಂಗ್ ಕೊಡುಗೆಯನ್ನು ಎಂದಿಗೂ ಭಾರತೀಯ ಕ್ರಿಕೆಟ್ ಮರೆಯುವುದಿಲ್ಲ.

ಒಟ್ಟಿನಲ್ಲಿ ರಿಷಬ್ ಪಂತ್ ಗೆ ಹಿರಿಯ ಕ್ರಿಕೆಟಿಗರ ಮಾರ್ಗದರ್ಶನ ಸಿಗುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟ್ ಪಂಡಿತರು ರಿಷಬ್ ಪಂತ್ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದ ರಿಷಬ್ ಪಂತ್ ಟಿ-20 ಮತ್ತು ಏಕದಿನ ಕ್ರಿಕೆಟ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಇದೀಗ ಏಕದಿನ ಕ್ರಿಕೆಟ್ ನಲ್ಲಿ ರಿಷಬ್ ಪಂತ್ ಲಯ ಕಂಡುಕೊಂಡಿದ್ದಾರೆ. ಹಾಗೇ ಯಾವ ರೀತಿ ಇನಿಂಗ್ಸ್ ಕಟ್ಟಬಹುದು ಎಂಬುದನ್ನು ಅರಿತುಕೊಂಡಿದ್ದಾರೆ.
ಒಟ್ಟಿನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನಲ್ಲಿ ಶತಕ ದಾಖಲಿಸಿದ್ದ ಏಷ್ಯಾದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.