ಆರಂಭಿಕ ಆಘಾತದ ನಡುವೆಯೂ ಜಾನಿ ಬೈರ್ಸ್ಟೋ(109*) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದಾಗಿ ಇಂಗ್ಲೆಂಡ್, ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಸಮಬಲದ ಪ್ರದರ್ಶನ ನೀಡಿದೆ.
ಆಂಟಿಗುವಾದಲ್ಲಿ ಮಂಗಳವಾರದಿಂದ ಆರಂಭಗೊಂಡ ಮೊದಲ ಟೆಸ್ಟ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಟಾಪ್ ಆರ್ಡರ್ ಬ್ಯಾಟ್ಸಮನ್ಗಳ ವೈಫಲ್ಯದ ನಡುವೆಯೂ ಜಾನಿ ಬೈರ್ಸ್ಟೋ ಶತಕ ತಂಡಕ್ಕೆ ಆಸರೆಯಾಯಿತು. ಪರಿಣಾಮ ಇಂಗ್ಲೆಂಡ್ ಮೊದಲ ದಿನದಂತ್ಯಕ್ಕೆ 86 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 268 ರನ್ಗಳಿಸಿದೆ. ಬೈರ್ಸ್ಟೋ(109*) ಹಾಗೂ ಕ್ರಿಸ್ ವೋಕ್ಸ್(24*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆಂಗ್ಲರಿಗೆ ಆರಂಭಿಕ ಶಾಕ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಅಲೆಕ್ಸ್ ಲೀಸ್(4) ಹಾಗೂ ಝಾಕ್ ಕ್ರಾಲಿ(8) ಬ್ಯಾಟಿಂಗ್ ಆರಂಭಿಸಿದರು. ಆದರೆ ವಿಂಡೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಈ ಜೋಡಿ ಬಂದಷ್ಟೇ ಬೇಗ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ನಾಯಕ ಜೋ ರೂಟ್(13) ಹಾಗೂ ಡಾನ್ ಲಾರೆನ್ಸ್(20) ಸಹ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಪರಿಣಾಮ 48 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು.
ಬೈರ್ಸ್ಟೋ ಶತಕದ ಆಸರೆ
ಈ ಹಂತದಲ್ಲಿ ಜೊತೆಯಾದ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್(36) ಹಾಗೂ ಜಾನಿ ಬೈರ್ಸ್ಟೋ(109*) 5ನೇ ವಿಕೆಟ್ಗೆ 67 ರನ್ಗಳ ಜೊತೆಯಾಟ ಆಡುವ ಮೂಲಕ ಚೇತರಿಕೆ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ಬೆನ್ ಸ್ಟೋಕ್ಸ್ ವೈಯಕ್ತಿಕ 36 ರನ್ಗಳಿಸಿ ಪೆವಿಲಿಯನ್ ಸೇರಿದರು. ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದ ಜಾನಿ ಬೈರ್ಸ್ಟೋ, ಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನ 250ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. 6ನೇ ವಿಕೆಟ್ಗೆ ಜೊತೆಯಾದ ಕ್ರಿಸ್ ವೋಕ್ಸ್(24*) ಎಚ್ಚರಿಕೆಯ ಆಟವಾಡುವ ಮೂಲಕ ಸಾಥ್ ನೀಡಿದರು. ವೆಸ್ಟ್ ಇಂಡೀಸ್ ಪರ ಕೇಮರ್ ರೋಚ್, ಜೇಡನ್ ಸೀಲ್ಸ್ ಹಾಗೂ ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರು.