ರಾಫೆಲ್ ನಡಾಲ್, ನೊವಾಕ್ ಜಾಕೋವಿಕ್ ಮತ್ತು ರೋಜರ್ ಫೆಡರರ್… ಆಧುನಿಕ ಟೆನಿಸ್ ಜಗತ್ತಿನ ಈ ದಿಗ್ಗಜರಿಗೆ ಸರಿ ಸಮಾನರು ಯಾರೂ ಇಲ್ಲ. ಕಳೆದ 2 ದಶಕಗಳಿಂದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯು.ಎಸ್. ಓಪನ್ನಲ್ಲಿ ಇವರುಗಳದ್ದೇ ಕಾರುಬಾರು. ಅಲ್ಲೊಬ್ಬ, ಇಲ್ಲೊಬ್ಬ ಬೇರೆ ಆಟಗಾರರು ಪ್ರಶಸ್ತಿ ಗೆದ್ದರೂ, ಅತ್ಯಂತ ಹೆಚ್ಚು ಪ್ರಶಸ್ತಿ ಹಂಚಿಕೊಂಡಿದ್ದು ಈ ಮೂವರೇ…!
ಸ್ಪೇನ್ನ ರಾಫೆಲ್ ನಡಾಲ್, ಸೆರ್ಬಿಯಾದ ನೊವಾಕ್ ಜೊಕೊವಿಕ್ ಮತ್ತು ಸ್ವಿಟ್ಜರ್ಲೆಂಡ್ನ ರೋಜರ್ ಫೆಡರ್ ತಲಾ 20 ಗ್ರಾನ್ ಸ್ಲಾಂಗಳೊಂದಿಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈಗ 21ನೇ ಗ್ರಾನ್ ಸ್ಲಾಂ ಗೆಲ್ಲಲು ಕೇವಲ ರಾಫೆಲ್ ನಡಾಲ್ಗೆ ಮಾತ್ರ ಅವಕಾಶವಿದೆ. ಈ ಬಾರಿಯ ಆಸ್ಟ್ರೇಲಿಯನ್ ಓಪನ್ನಲ್ಲಿ ಫೆಡರರ್ ಗಾಯದಿಂದಾಗಿ ಆಟ ಆಡುತ್ತಿಲ್ಲ. ನೊವಾಕ್ ಜಾಕೋವಿಕ್ ಕೊರೊನಾ ಲಸಿಕೆ ವಿಚಾರದಲ್ಲಿ ಸರ್ಕಾರದ ಜೊತೆ ಜಗಳಕ್ಕಿಳಿದು ಕೋರ್ಟ್ ಮೂಲಕ ಗಡಿಪಾರಾಗಿದ್ದಾರೆ. ಹೀಗಾಗಿ ಕಣದಲ್ಲಿ ಉಳಿದಿರುವುದು ರಾಫಾ ಮಾತ್ರ..
ಸ್ಪೇನ್ ಗೂಳಿ ಈಗ 21ನೇ ಗ್ರಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ 4ನೇ ಹಂತಕ್ಕೇರಿರುವ ರಾಫಾ, ಕ್ವಾರ್ಟರ್, ಸೆಮಿ ಹಾಗೂ ಫೈನಲ್ ಗೆಲ್ಲುವ ನೆಚ್ಚಿನ ಸ್ಪರ್ಧಿ. ಆದರೆ ಆಸ್ಟ್ರೇಲಿಯನ್ ಅಂಗಳದಲ್ಲಿ ರಾಫಾ ದಾಖಲೆ ಅಷ್ಟಾಗಿ ಚೆನ್ನಾಗಿಲ್ಲ. ಹೀಗಾಗಿ ಸ್ಪೇನ್ ಗೂಳಿಯನ್ನು ಸೋಲಿಸುವ ಆಟಗಾರ ಯಾರು ಅನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಆಧುನಿಕ ಟೆನಿಸ್ ಜಗತ್ತಿನ ಸಾಮ್ರಾಟ್ ಸ್ಥಾನಕ್ಕೆ ರಾಫಾ, ಜೋಕೊವಿಕ್ ಮತ್ತು ಫೆಡರರ್ ನಡುವೆ ಜಿದ್ದಾಜಿದ್ದಿ ಇದೆ. ಇತ್ತೀಚಿನ ವರ್ಷಗಳಲ್ಲಿ ಫೆಡರರ್ ಫಿಟ್ ನೆಸ್ ಹಾಗೂ ಫಾರ್ಮ್ ಸಮಸ್ಯೆ ಎದುರಿಸ್ತಿರುವುದರಿಂದ ರಾಫಾ ಮತ್ತು ಜಾಕೋವಿಕ್ ನಡುವೆ ಮುಂದಿನ ದಿನಗಳಲ್ಲಿ ಸಾಮ್ರಾಟ್ ಸ್ಥಾನಕ್ಕೆ ಫೈಟ್ ನಡೆಯುವುದು ಗ್ಯಾರೆಂಟಿ..!