ಐಪಿಎಲ್, ಇಪಿಎಲ್. ಎನ್ಎಫ್ಎಲ್, ಬುಂಡೇಸ್ ಲೀಗಾ ಹೀಗೆ ವಿಶ್ವ ಕ್ರೀಡಾಲೋಕದಲ್ಲಿ ಸಾಕಷ್ಟು ಲೀಗ್ಗು ನಡೆಯುತ್ತವೆ. ವರ್ಷ ಪೂರ್ತಿ ಕ್ರೀಡಾಪಟುಗಳು ಬ್ಯುಸಿಯಾಗಿರುವ ಜೊತೆಗೆ ಅವರಿಗೆ ದುಡ್ಡನ್ನೂ ಕೊಡುತ್ತವೆ ಇಂತಹ ಪ್ರೊಫೆಷನಲ್ ಲೀಗ್ಗಳು. ಅಂದಹಾಗೇ ಈ ಲೀಗ್ಗಳು ಈಗ ಪ್ರಸಾರಕರ ಪಾಲಿಗೆ ದುಡ್ಡು ತಂದುಕೊಡುವ ಸಾಧನಗಳಾದರೆ, ಆಯೋಜಕರಿಗೆ ಈ ಲೀಗ್ಗಳು ದುಡ್ಡುಗಳಿಸುವ ಮಾರ್ಗವೂ ಆಗಿದೆ.
ಅಂದಹಾಗೇ ಒಂದು ಪಂದ್ಯದ ಮೀಡಿಯಾ ರೈಟ್ಸ್ನಿಂದ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುವ ವಿಶ್ವದ ಪ್ರಸಿದ್ಧ ಲೀಗ್ಗಳು ಸಾಕಷ್ಟಿವೆ. ಇತ್ತೀಚೆಗೆ ಐಪಿಎಲ್ ಮಾಧ್ಯಮ ಹಕ್ಕು ಭರ್ಜರಿ ಮೊತ್ತಕ್ಕೆ ಹರಾಜಾದ ಮೇಲೆ ಎಲ್ಲಾ ಲೀಗ್ಗಳ ಪಂದ್ಯವೊಂದು ಗಳಿಸುವ ದುಡ್ಡೆಷ್ಟು ಅನ್ನುವ ಚರ್ಚೆ ನಡೆಯುತ್ತಿದೆ.
ಮಾಧ್ಯಮ ಹಕ್ಕು ಅನ್ನುವುದು ವಿವಿಧ ಲೀಗ್ಗಳಲ್ಲಿ ವಿವಿಧ ರೀತಿಯಲ್ಲಿ ಹಂಚಿ ಹೋಗಿರುತ್ತದೆ. ಆದರೆ ಒಂದು ಪಂದ್ಯಕ್ಕೆ ಬರುವ ಲೆಕ್ಕಾಚಾರವನ್ನು ಮಾತ್ರ ಲೆಕ್ಕಹಾಕಲಾಗುತ್ತದೆ. ಪಂದ್ಯಗಳ ಸಂಖ್ಯೆಯ ಮೇಲೂ ಇದು ನಿಗದಿಯಾಗುತ್ತದೆ. ಸದ್ಯ ಅಮೆರಿಕದ ಫುಟ್ಬಾಲ್ ಲೀಗ್ ಐಪಿಎಲ್ಗಿಂತ ಮುಂದಿರುವ ಏಕೈಕ ಲೀಗ್.
* ಎನ್ಎಫ್ಎಲ್: ನ್ಯಾಷನಲ್ ಫುಟ್ಬಾಲ್ ಲೀಗ್, ಅಮೆರಿಕ: ₹ 132 ಕೋಟಿ
* ಐಪಿಎಲ್: ಭಾರತ: ₹ 114 ಕೋಟಿ
* ಇಂಗ್ಲೀಷ್ ಪ್ರೀಮಿಯರ್ ಲೀಗ್: ಇಂಗ್ಲೆಂಡ್: ₹ 82 ಕೋಟಿ
* ಎಂಎಲ್ಬಿ: ಬೇಸ್ ಬಾಲ್ ಲೀಗ್ ಅಮೆರಿಕ: ₹ 75 ಕೋಟಿ
* ಬುಂಡೆಸ್ಲೀಗಾ: ಜರ್ಮನ್ ಫುಟ್ಬಾಲ್ ಲೀಗ್: ₹ 30 ಕೋಟಿ
ಇವಿಷ್ಟು ವಿಶ್ವದ ಟಾಪ್ 5 ಲೀಗ್ಗಳಾದರೆ, ಇನ್ನೂ ಹಲವು ಲೀಗ್ಗಳು ನಡೆಯುತ್ತವೆ. ಭಾರತದಲ್ಲೇ ಇಂಡಿಯನ್ ಸೂಪರ್ ಲೀಗ್ ಅನ್ನುವ ಫುಟ್ಬಾಲ್ ಟೂರ್ನಿ, ಪ್ರೊ ಕಬ್ಬಡಿ, ಬ್ಯಾಡ್ಮಿಂಟನ್ ಲೀಗ್ಗಳು ನಡೆಯುತ್ತವೆ. ಇವುಗಳು ದೊಡ್ಡ ಮೊತ್ತ ತಂದುಕೊಡದೇ ಇದ್ದರೂ ಆಯೋಜಕರಿಗೆ ಲಾಭ ತಂದುಕೊಡುತ್ತವೆ ಅನ್ನುವುದು ಸುಳ್ಳಲ್ಲ.