ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ಗೆ ವೇದಿಕೆಯಾಗಿದ್ದ ರಾವಲ್ಪಿಂಡಿ ಪಿಚ್ ಕುರಿತು ಎದಿರುವ ಚರ್ಚೆಯನ್ನ ತಳ್ಳಿಹಾಕಿರುವ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟ್ಸಮನ್ ಇಮಾಮ್-ಉಲ್-ಹಕ್, ಆಸ್ಟ್ರೇಲಿಯಾ ಎಂದಾದರೂ ಎದುರಾಳಿ ತಂಡವನ್ನ ಸಂಪರ್ಕಿಸಿ ಪಿಚ್ ಸಿದ್ಧಪಡಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ರಾವಲ್ಪಿಂಡಿ ಪಿಚ್ ಕುರಿತು ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿರುವ ಇಮಾಮ್-ಉಲ್-ಹಕ್, ಐದು ದಿನಗಳ ಟೆಸ್ಟ್ ಪಂದ್ಯ ಡ್ರಾ ಆಗುವುದನ್ನ ಯಾರು ಬಯಸುವುದಿಲ್ಲ. ಹೀಗಾಗಿ ಎಲ್ಲರೂ ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಾರೆ. ಆದರೆ ನಾವು ಆಸ್ಟ್ರೇಲಿಯಾಕ್ಕೆ ಹೋದಾಗ ಅವರು ನಮ್ಮನ್ನ ಸಂಪರ್ಕಿಸಿ ಪಿಚ್ ಸಿದ್ಧಪಡಿಸದೆ, ಅವರ ಇಚ್ಛೆಗೆ ಅನುಗುಣವಾಗಿ ಮಾಡಿರುತ್ತಾರೆ. ಹೀಗಾಗಿ ನಮ್ಮ ತಂಡದ ಸ್ಟ್ರೆಂಥ್ ಏನೆಂದು ಅರಿತು ಅದಕ್ಕೆ ಅನುಗುಣವಾಗಿ ಆಡಬೇಕೆಂದು ನಾನು ಭಾವಿಸುತ್ತೇನೆ.
ಆದರೆ ಕರಾಚಿಯಲ್ಲಿ ನಾವು ನಮ್ಮ ಪರವಾಗಿ ಫಲಿತಾಂಶವನ್ನು ಎದುರು ನೋಡುತ್ತಿದ್ದೇವೆ. ರಾವಲ್ಪಿಂಡಿ ಟೆಸ್ಟ್ ಚೆನ್ನಾಗಿ ಆಡಿದ್ದರಿಂದ ನಾವು ಎಲ್ಲಾ 10 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದೆವು ಎಂದು ನಾನು ಭಾವಿಸುತ್ತೇನೆ. ಆದರೆ ದುರಾದೃಷ್ಟವಶಾತ್ ಮಳೆ ಹಾಗೂ ಮಂದ ಬೆಳಕಿನ ಕಾರಣದಿಂದ 70 ಓವರ್ಗಳ ಆಟ ನಡೆಯಲಿಲ್ಲ. ಒಂದೊಮ್ಮೆ 70 ಓವರ್ಗಳ ಆಟ ನಡೆದಿದ್ದರೆ ನಾವು ಎದುರಾಳಿ ತಂಡಕ್ಕೆ ಮತ್ತೆ ಬ್ಯಾಟಿಂಗ್ ಮಾಡಲು ನೀಡುತ್ತಿದ್ದೆವು, ಆಗ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ಎರಡು ದಶಕಗಳ ಬಳಿಕ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ರಾವಲ್ಪಿಂಡಿ ಅಂಗಳ ವೇದಿಕೆಯಾಗಿತ್ತು. ಆದರೆ ಉಭಯ ತಂಡಗಳ ನಡುವಿನ ಈ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು. ಐದು ದಿನಗಳ ಪಂದ್ಯದಲ್ಲಿ ಬ್ಯಾಟ್ಸಮನ್ಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದು, ಎರಡು ತಂಡಗಳ ಬೌಲರ್ಗಳು ಕೇವಲ 14 ವಿಕೆಟ್ಗಳನ್ನ ಪಡೆಯಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಪಂದ್ಯದ ಬಳಿಕ ರಾವಲ್ಪಿಂಡಿ ಪಿಚ್ ಕುರಿತು ಸಾಕಷ್ಟು ಚರ್ಚೆಗಳು ನಡೆಯಲಾರಂಭಿಸಿವೆ.