ಕೆರಿಬಿಯನ್ಸ್ ಅಂದರೆ ಪವರ್ ಹಿಟ್ಟರ್ಗಳು. ಮೈದಾನ ಯಾವುದೇ ಇರಲಿ, ಪಿಚ್ ಸ್ಪಿನ್ ಫ್ರೆಂಡ್ಲಿ ಅಥವಾ ಫಾಸ್ಟ್ ಬೌಲಿಂಗ್ಗೆ ನೆರವು ನೀಡಲಿ, ಅವರದ್ದು ಒಂದೇ ಶೈಲಿ ಅದುವೇ ಹೊಡಿ ಬಡಿ ಶೈಲಿ. ಟಿ20 ಕ್ರಿಕೆಟ್ನ ಸುಲ್ತಾನರ ತರಹ ಆಡುವುದು ಕೆರಿಬಿಯನ್ನರ ಸ್ಟೈಲ್. ಏಕದಿನ ಪಂದ್ಯಕ್ಕೂ ಅದೇ ಟಚ್ ಕೊಡ್ತಿದ್ದಾರೆ ವೆಸ್ಟ್ಇಂಡೀಸ್ ಕ್ರಿಕೆಟಿಗರು.
ಈ ಬಾರಿ ಭಾರತಕ್ಕೆ ಬಂದಿರುವ ಆಟಗಾರರ ಪೈಕಿ ಹಲವು ಹೊಡಿಬಡಿ ಶೈಲಿಯ ಆಟಗಾರರೇ. ನಾಯಕ ಕೈರಾನ್ ಪೊಲ್ಲಾರ್ಡ್, ಫೆಬಿಯನ್ ಅಲೆನ್, ಬೋನರ್, ಶರ್ಮನ್ ಬ್ರೂಕ್ಸ್, ಜೇಸನ್ ಹೋಲ್ಡರ್, ರೊಮರಿಯೋ ಶೆಫರ್ಡ್ ಬಿಗ್ ಹಿಟ್ಟಿಂಗ್ಗೆ ಹೇಳಿ ಮಾಡಿಸಿದ ಆಟಗಾರರು. ಅಚ್ಚರಿ ಅಂದರೆ ಇವರೆಲ್ಲರೂ ಬೌಲಿಂಗ್ ಕೂಡ ಮಾಡಬಲ್ಲರು.
ಇನ್ನು ನಿಕೊಲಸ್ ಪೂರನ್, ಬ್ರೆಂಡನ್ ಕಿಂಗ್ ಮತ್ತು ಶೈ ಹೋಪ್ರಂತಹ ಆಟಗಾರರು ಬ್ಯಾಟಿಂಗ್ ತಾಂತ್ರಿಕತೆಯನ್ನು ಮೈಗೂಡಿಸಿದ್ದಾರೆ. ಬ್ರೆಂಡನ್ ಕಿಂಗ್ ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ನ ಆವಿಷ್ಕಾರ ಅನ್ನುವ ಮಟ್ಟಿಗೆ ಹೆಸರು ಮಾಡಿದ್ದಾರೆ.
ಅಚ್ಚರಿ ಅಂದರೆ ಏಕದಿನ ಕ್ರಿಕೆಟ್ನ ಸ್ಪೆಷಲಿಸ್ಟ್ಗಳು ವೆಸ್ಟ್ಇಂಡೀಸ್ ತಂಡದಲ್ಲಿಲ್ಲ. ಆದರೆ ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡಬಲ್ಲ ಅಥವಾ ಬೌಲಿಂಗ್ ಜೊತೆ ಬ್ಯಾಟಿಂಗ್ ಮಾಡಬಲ್ಲ ಮಲ್ಟಿ ಯುಟಿಲಿಟಿ ಕ್ರಿಕೆಟರ್ಗಳನ್ನು ವೆಸ್ಟ್ಇಂಡೀಸ್ ಭಾರತಕ್ಕೆ ಕರೆದುಕೊಂಡು ಬಂದಿದೆ. ಬಿಗ್ ಹಿಟ್ಟಿಂಗ್ ಬಗ್ಗೆ ಮಾತನಾಡಿದರೆ ಈ ಕ್ರಿಕೆಟರ್ಗಳ ಮುಂದೆ ವಿಶ್ವದ ಯಾವುದೇ ಮೈದಾನ ಕೂಡ ಸಣ್ಣದಾಗಿಯೇ ಕಾಣುತ್ತದೆ.
ಏಕದಿನ ಸರಣಿ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತದ ಮಟ್ಟಿಗೆ ಈ ಮೈದಾನದ ಬೌಂಡರಿಗಳು ಕೊಂಚ ದೊಡ್ಡದಾಗಿಯೇ ಇವೆ. ಆದರೆ ಪಿಚ್ ಸ್ಪಿನ್ ಫ್ರೆಂಡ್ಲಿ ಆಗಿರಲಿದೆ. ಒಟ್ಟಿನಲ್ಲಿ ವೆಸ್ಟ್ಇಂಡೀಸ್ ಟಿ20 ಕ್ರಿಕೆಟ್ನ ಅಭಿರುಚಿಯನ್ನು ಬದಲಾಗುವಂತೆ ಮಾಡಿತ್ತು. ಈಗ ಏಕದಿನ ಕ್ರಿಕೆಟ್ಗೂ ಮೊದಲ ಎಸೆತದಿಂದಲೇ ಸ್ಪೋಟಕ ಟಚ್ ಕೊಡುವ ಪ್ಲಾನ್ನಲ್ಲಿದೆ.