West Indies cricket – ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬಿರುಕು ಇಲ್ಲ.. ಸಿಡಬ್ಲ್ಯುಐ ಸ್ಪಷ್ಟನೆ
ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಸ್ಪಷ್ಟನೆ ನೀಡಿದೆ.
ಸಾಮಾಜಿಕ ಜಾಲ ತಾಣದಲ್ಲಿ ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ಮತ್ತು ತಂಡದ ಇತರೆ ಆಟಗಾರರ ನಡುವೆ ಬಿರುಕು ಬಿಟ್ಟಿದೆ ಎಂಬ ಆಡಿಯೋ ರೆಕಾರ್ಡ್ ಹರಿದಾಡುತ್ತಿದೆ.
ಈ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಿಕಿ ಸ್ಕೆರಿಟ್ ಅವರು ಸ್ಪಷ್ಟನೆ ನೀಡಿದ್ದಾರೆ. ಇದು ಕುಚೇಷ್ಟೆಯ ಆರೋಪ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಧಾರ ರಹಿತವಾಗಿ ಈ ರೀತಿಯಾಗಿ ಮಾಡಲಾಗುತ್ತಿದೆ. ನಾಯಕ ಕಿರಾನ್ ಪೊಲಾರ್ಡ್ ಮತ್ತು ತಂಡದ ಇತರೆ ಆಟಗಾರರ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಇಲ್ಲ ಎಂದು ರಿಕಿ ಸ್ಕೆರಿಟ್ ಅವರು ಹೇಳಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಅದ್ಭುತ ಆಟವನ್ನು ಆಡುತ್ತಿದೆ. ಅಲ್ಲದೆ ಬಲಿಷ್ಠ ಇಂಗ್ಲೆಂಡ್ ತಂಡಕ್ಕೆ ತವರಿನಲ್ಲೇ ಸೋಲಿನ ರುಚಿ ತೋರಿಸಿದೆ. ಸರಣಿಯಲ್ಲಿ 2-1ರಿಂದ ಮುನ್ನಡೆ ಪಡೆದುಕೊಂಡಿದೆ. ಎರಡು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದ ವೆಸ್ಟ್ ಇಂಡೀಸ್ ಒಂದು ಪಂದ್ಯವನ್ನು ಕೇವಲ ಒಂದು ರನ್ ನಿಂದ ವಿರೋಚಿತವಾಗಿ ಸೋಲು ಅನುಭವಿಸಿತ್ತು.
ಇಂಗ್ಲೆಂಡ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 6ರಿಂದ ಫೆಬ್ರವರಿ 20ರವರೆಗೆ ವೆಸ್ಟ್ ಇಂಡೀಸ್ ಮತ್ತು ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಏಕದಿನ ಪಂದ್ಯ ಅಹಮದಾಬಾದ್ ನಲ್ಲಿ ಹಾಗೂ ಟಿ-20 ಪಂದ್ಯಗಳು ಕೊಲ್ಕತ್ತಾದಲ್ಲಿ ನಡೆಯಲಿದೆ.