Rohit sharma – ಟೀಮ್ ಇಂಡಿಯಾದ ಬಗ್ಗೆ ಚಿಂತೆ ಇಲ್ಲ.. ರೋಹಿತ್ ಬೆಸ್ಟ್ ಕ್ಯಾಪ್ಟನ್..!
ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿದೆ. ಟೀಮ್ ಇಂಡಿಯಾದ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವೆಸ್ಟ್ ಇಂಡಿಸ್ ನ ಮಾಜಿ ನಾಯಕ ಡರೇನ್ ಸಮಿ ಹೇಳಿದ್ದಾರೆ.
ರೋಹಿತ್ ಶರ್ಮಾ ಅದ್ಭುತವಾದ ನಾಯಕ. ತಂಡದ ಆಟಗಾರರಿಗೆ ಸ್ಪೂರ್ತಿ ನೀಡುವಂತಹ ಲೀಡರ್. ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವುದನ್ನು ನಾನು ನೋಡಿದ್ದೇನೆ. ಟೀಮ್ ಇಂಡಿಯಾ ರೋಹಿತ್ ನಾಯಕತ್ವದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ ಎಂದು ಡರೇನ್ ಸಮಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Indian cricket in good hands under Rohit’s captaincy
ರೋಹಿತ್ ಶರ್ಮಾ ಅವರಿಗೆ ಧೋನಿಯಂತೆ ತಂಡವನ್ನು ಮುನ್ನಡೆಸುವ ಕಲೆ ಗೊತ್ತಿದೆ. ಧೋನಿ, ಗೌತಮ್ ಗಂಭೀರ್ , ರೋಹಿತ್ ಶರ್ಮಾ ಮೊದಲಾದ ಆಟಗಾರರಿಗೆ ತಂಡದ ಆಟಗಾರರಿಂದ ಯಾವ ರೀತಿಯ ಪ್ರದರ್ಶನವನ್ನು ತೆಗೆಸಬೇಕು ಎಂಬುದು ಗೊತ್ತಿದೆ. ನನಗೆ ಭಾರತ ಕ್ರಿಕೆಟ್ ತಂಡದ ಬಗ್ಗೆ ಚಿಂತೆ ಆತಂಕಗಳು ಇಲ್ಲ. ಯಾಕಂದ್ರೆ ರೋಹಿತ್ ನಂತಹ ಉತ್ತಮ ನಾಯಕನ ಕೈಯಲ್ಲಿದೆ ಟೀಮ್ ಇಂಡಿಯಾ ಎಂದು ಸಮಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟಿ-20 ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ಅವರು ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಮುಂದಿನ ದಿನಗಳಲ್ಲಿ ಟೆಸ್ಟ್ ತಂಡದ ನಾಯಕನಾಗುವ ಸಾಧ್ಯತೆಗಳಿವೆ.
ರೋಹಿತ್ ನಾಯಕತ್ವದಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
ಇದೇ ವೇಳೆ, ಭಾರತ ವಿರುದ್ದದ ಏಕದಿನ ಮತ್ತು ಟಿ-20 ಸರಣಿಗಳಲ್ಲಿ ವೆಸ್ಟ್ ಇಂಡೀಸ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಡರೇನ್ ಸಮಿ ವ್ಯಕ್ತಪಡಿಸಿದ್ದಾರೆ.
ಐರ್ಲೆಂಡ್ ವಿರುದ್ದ ಆಘಾತ ಅನುಭವಿಸಿದ್ದ ವೆಸ್ಟ್ ಇಂಡೀಸ್ ಇಂಗ್ಲೆಂಡ್ ವಿರುದ್ದದ ಟಿ-20 ಸರಣಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದೆ. ಈಗಾಗಲೆ ಸರಣಿಯಲ್ಲಿ 2-1ರಿಂದ ಮುನ್ನಡೆ ಪಡೆದುಕೊಂಡಿದೆ. ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರು ಇದ್ದಾರೆ ಎಂದು ಸಮಿ ಹೇಳಿದ್ರು.
ಇನ್ನೊಂದೆಡೆ ನಾಯಕ ಕಿರಾನ್ ಪೊಲಾರ್ಡ್ ಅವರು ಸುಮಾರು ವರ್ಷಗಳಿಂದ ಭಾರತದ ತಾಣಗಳಲ್ಲಿ ಆಡಿದ್ದಾರೆ. ಹೀಗಾಗಿ ಇಲ್ಲಿ ಪಿಚ್ ನ ವರ್ತನೆ, ವಾತಾವರಣ ಎಲ್ಲವೂ ಅವರಿಗೆ ಗೊತ್ತಿದೆ. ಮತ್ತೊಂದೆಡೆ ಕೇಮರ್ ರಾಚ್ ಅವರು ವೆಸ್ಟ್ ಇಂಡೀಸ್ ತಂಡದ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂಬ ಅಭಿಮತವನ್ನು ಡರೇನ್ ಸಮಿ ವ್ಯಕ್ತಪಡಿಸಿದ್ದಾರೆ.