Sourav Ganguly.- ಟಿ-20 ಪಂದ್ಯ ನೋಡಲು ಪ್ರೇಕ್ಷಕರಿಗೆ ಅವಕಾಶವಿಲ್ಲ – ಬಿಸಿಸಿಐ ಬಿಗ್ ಬಾಸ್ ಸ್ಪಷ್ಟನೆ..!
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿ ಫೆಬ್ರವರಿ 6ರಿಂದ ಶುರುವಾಗಲಿದೆ. ಈಗಾಗಲೇ ಅಹಮಾದಾಬಾದ್ ನಲ್ಲಿರುವ ಉಭಯ ತಂಡಗಳು ಬಯೋಬಬಲ್ ನಲ್ಲಿದ್ದುಕೊಂಡು ಪಂದ್ಯಕ್ಕೆ ತಯಾರಿ ನಡೆಸುತ್ತಿವೆ. ಈ ನಡುವೆ ಟೀಮ್ ಇಂಡಿಯಾದ ನಾಲ್ಕು ಮಂದಿ ಆಟಗಾರರು ಮತ್ತು ಮೂರು ಮಂದಿ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಐಸೋಲೇಷನ್ ನಲ್ಲಿದ್ದಾರೆ.
ಮೂರು ಏಕದಿನ ಪಂದ್ಯಗಳು ಅಹಮದಾಬಾದ್ ನ ನರೇಂದ್ರ ಮೋದಿ ಅಂಗಣದಲ್ಲಿ ನಡೆಯಲಿದೆ. ಹಾಗೇ ಫೆಬ್ರವರಿ 16ರಿಂದ ಕೊಲ್ಕತ್ತಾದಲ್ಲಿ ಟಿ-20 ಪಂದ್ಯಗಳು ನಡೆಯಲಿವೆ. ಫೆಬ್ರವರಿ 18 ಮತ್ತು 20 ರಂದು ಎರಡು ಮತ್ತು ಮೂರನೇ ಟಿ-20 ಪಂದ್ಯ ನಡೆಯಲಿದೆ.
ಇನ್ನೊಂದೆಡೆ ಏಕದಿನ ಸರಣಿಯ ಪಂದ್ಯವನ್ನು ನೋಡಲು ಬಿಸಿಸಿಐ ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದ್ರೆ ಟಿ-20 ಸರಣಿಗೆ ಪಶ್ಚಿಮ ಬಂಗಾಳ ಸರ್ಕಾರ ಶೇ.75ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ ನೀಡಿದೆ ಎಂದು ಹೇಳಲಾಗುತ್ತಿತ್ತು.
We are not allowing spectators at the Eden Gardens- BCCI president Sourav Ganguly.
ಆದ್ರೆ ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ಟಿ-20 ಪಂದ್ಯಗಳಿಗೂ ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ. ಈ ಪಂದ್ಯಗಳು ಕೂಡ ಬಯೋಬಬಲ್ ನಲ್ಲಿ ನಡೆಯಲಿದೆ. ನಮಗೆ ಆಟಗಾರರ ಆರೋಗ್ಯ ಮುಖ್ಯ. ಹೀಗಾಗಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಪಂದ್ಯಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಅನುಮತಿಯನ್ನು ಪಡೆದುಕೊಂಡಿದ್ದೇವೆ. ಸರ್ಕಾರ ಶೇ75ರಷ್ಟು ಪ್ರೇಕ್ಷಕರಿಗೆ ಅವಕಾಶ ಕೂಡ ನೀಡಿದೆ. ಆದ್ರೆ ನಾವು ಅವಕಾಶ ನೀಡುವುದಿಲ್ಲ. ನಮಗೆ ಆಟಗಾರರ ಆರೋಗ್ಯ ಮುಖ್ಯ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಇದೇ ವೇಳೆ ಫೆಬ್ರವರಿ 6ರಂದು ವೆಸ್ಟ್ ಇಂಡೀಸ್ ವಿರುದ್ದ ನಡೆಯಲಿರುವ ಮೊದಲ ಏಕದಿನ ಪಂದ್ಯ ಟೀಮ್ ಇಂಡಿಯಾ ಮತ್ತು ಭಾರತೀಯ ಕ್ರಿಕೆಟ್ ಗೆ ಅವಿಸ್ಮರಣೀಯ ಪಂದ್ಯವಾಗಿದೆ. ಟೀಮ್ ಇಂಡಿಯಾ ಒಂದು ಸಾವಿರ ಏಕದಿನ ಪಂದ್ಯವನ್ನಾಡಿದ್ದ ಗೌರವಕ್ಕೆ ಪಾತ್ರವಾಗಲಿದೆ. ಆದ್ರೆ ಈ ವೇಳೆ ಯಾವುದೇ ಸಂಭ್ರಮದ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.