ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭವಾಗಿದೆ. ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಬಯಸುವ ಆಟಗಾರರು ಐಪಿಎಲ್ ನಲ್ಲಿ ಸ್ಥಿರ ಪ್ರದರ್ಶನ ನೀಡುವ ಕಸನಿನಲ್ಲಿದ್ದಾರೆ. ಯುವ ಆಟಗಾರರು ಸಿಕ್ಕ ಅವಕಾಶದಲ್ಲಿ ತಮ್ಮಲ್ಲಿನ ಕ್ಷಮತೆಯನ್ನು ಸಾಬೀತು ಪಡಿಸಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಆಲ್ ರೌಂಡರ್ ಗಳು ಮಿಂಚುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆ ಸೋಲುನ್ನು ಅಪ್ಪಿಕೊಂಡಿದೆ. ಆದರೆ ಈ ತಂಡದ ಬ್ಯಾಟಿಂಗ್ ವಿಭಾಗ ಬಲ ಪಡಿಸುವ ಆಟಗಾರ ಸಿಕ್ಕಿದಂತಾಗಿದೆ. ರಾಯಲ್ಸ್ ವಿರುದ್ಧ ಸಿಕ್ಕ ಅವಕಾಶವನ್ನು ಬಳಸಿಕೊಂಡು ರನ್ ಮಹಲ್ ಕಟ್ಟಿದ ಆಟಗಾರ ವಾಶಿಂಗ್ಟನ್ ಸುಂದರ್. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸುಂದರ್ ರಾಜಸ್ಥಾನ ವಿರುದ್ಧ ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ.
ವಾಶಿಂಗ್ಟನ್ ಸುಂದರ್ ಆರ್ ಆರ್ ವಿರುದ್ಧ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಅಲ್ಲದೆ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿ ರಂಜಿಸಿದರು. ಇವರು ಕೇವಲ 14 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿದರು. ಇವರ ಸ್ಟ್ರೈಕ್ ರೇಟ್ 285.71.
ವಾಶಿಂಗ್ಟನ್ ಸುಂದರ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಹೊಂದಿದ್ದಾರೆ. ಮಂಗಳವಾರ ನೀಡಿದ ಪ್ರದರ್ಶನ ಇವರ ಕನಸಿಗೆ ರೆಕ್ಕೆ ಕಟ್ಟಿದೆ ಎಂದರೆ ತಪ್ಪಾಗಲಾರದು. ಇವರು ತಂಡಕ್ಕೆ ಸೆಲೆಕ್ಟ್ ಆದರೆ ರೈಟ್ ಆಂಡ್ ಲೆಫ್ಟ್ ಕಾಂಬಿನೇಶನ್ ಚಿಂತೆ ಸರಿದೂಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.
ವಾಶಿಂಗ್ಟನ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಟಗಾರ. ಇವರು ಪವರ್ ಪ್ಲೇಗಳಲ್ಲಿ ಪವರ್ ಫುಲ್ ಹಿಟ್ ಗಳನ್ನು ಬಾರಿಸುವ ಕ್ಷಮತೆ ಹೊಂದಿದ್ದಾರೆ. ಇನ್ನು ತಂಡದಲ್ಲಿ ಕಾಣಿಸಿಕೊಂಡಿರುವ ಸ್ಪಿನ್ ಆಲ್ ರೌಂಡರ್ ಕೊರತೆಗೆ ಇವರು ಸೂಕ್ತ ಎನಿಸಬಹುದು. ಅಲ್ಲದೆ ಇವರಿಗೆ ಆಸ್ಟ್ರೇಲಿಯಾ ಅಂಗಳದಲ್ಲಿ ಆಡಿದ ಅನುಭವವೂ ಇದೆ. ಟೆಸ್ಟ್ ಪಂದ್ಯಗಳಲ್ಲಿ ಮನಮೋಹಕ ಪ್ರದರ್ಶನ ನೀಡಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಮಿಂಚಿದ್ದರು.
ವಾಶಿಂಗ್ಟನ್ ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲರು. ತಮ್ಮ ಕೋಟಾದ ನಾಲ್ಕು ಓವರ್ ಗಳನ್ನು ಉತ್ತಮವಾಗಿ ನಿಭಾಯಿಸಬಲ್ಲರು. ಮುಂದಿನ ಪಂದ್ಯಗಳಲ್ಲಿ ಇವರ ಪ್ರದರ್ಶನ ಹೇಗಿರಲಿದೆ? ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.