Wanindu Hasaranga – ಲಂಕಾಗೆ ಹೀರೋ… ಪಾಕ್‍ಗೆ ವಿಲನ್… ಈ ಆರ್ ಸಿಬಿ ಪ್ಲೇಯರ್…!

ವನಿಂದು ಹಸರಂಗ.. ಶ್ರೀಲಂಕಾದ ಯುವ ಸ್ಪಿನ್ನರ್. ಐಪಿಎಲ್ ನಲ್ಲಿ ಆರ್ ಸಿ ಬಿ ತಂಡದ ದುಬಾರಿ ಬೆಲೆಯ ಕ್ರಿಕೆಟರ್.
ಹೌದು, 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ವನಿಂದು ಹಸರಂಗ ಅವರನ್ನು 10.75 ಕೋಟಿ ರೂಪಾಯಿಗೆ ಖರೀದಿ ಮಾಡಿದಾಗ ಎಲ್ಲರು ಹುಬ್ಬೇರಿಸಿದ್ದರು. ಆದ್ರೆ ಹಸರಂಗ ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಮೊದಲೇ ತಿಳಿದುಕೊಂಡಿದ್ದ ಆರ್ ಸಿಬಿ ಮ್ಯಾನೇಜ್ ಮೆಂಟ್ ಹಿಂದು ಮುಂದೆ ನೋಡದೇ ಖರೀದಿ ಮಾಡಿತು.
ಹೌದು, ವನಿಂದು ಹಸರಂಗ ಅವರು ಟಿ-20 ಕ್ರಿಕೆಟ್ ನ ಅದ್ಭುತ ಬೌಲರ್. ಜೊತೆಗೆ ಬ್ಯಾಟಿಂಗ್ ನಲ್ಲೂ ಗಮನ ಸೆಳೆಯುವ ಆಟಗಾರ.
44 ಟಿ-20 ಪಂದ್ಯಗಳನ್ನು ಆಡಿರುವ ಹಸರಂಗ ಅವರು, 71 ವಿಕೆಟ್ ಹಾಗೂ 448 ರನ್ ಕೂಡ ಕಲೆ ಹಾಕಿದ್ದಾರೆ.
ಇದೀಗ ವನಿಂದು ಹಸರಂಗ ಅವರು ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವನಿಂದು ಹಸರಂಗ ಫೈನಲ್ ಪಂದ್ಯದಲ್ಲಿ ದಿಟ್ಟ ಆಟವನ್ನೇ ಆಡಿದ್ದರು. ಒಂದು ಹಂತದಲ್ಲಿ ಲಂಕಾ ತಂಡ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ತಂಡಕ್ಕೆ ಹಸರಂಗ ಅವರು ಚೇತರಿಕೆ ನೀಡಿದ್ದರು. 58ಕ್ಕೆ 5 ವಿಕೆಟ್ ಕಳೆದುಕೊಂಡು ಆತಂಕದಲ್ಲಿದ್ದ ಲಂಕಾ ತಂಡಕ್ಕೆ ಹಸರಂಗ ಅವರು ಹಸನ್ಮುಖಿಯಾದರು. ಆರನೇ ವಿಕೆಟ್ ಗೆ ಭಾನುಕಾ ರಾಜಪಕ್ಷೆ ಜೊತೆ 58 ರನ್ ಕೂಡ ಕಲೆ ಹಾಕಿದ್ದರು. ಹಸರಂಗ 21 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ 36 ರನ್ ಸಿಡಿಸಿದ್ದರು.

ಬಳಿಕ ಬೌಲಿಂಗ್ ನಲ್ಲೂ ಹಸರಂಗ ಪಾಕ್ ತಂಡಕ್ಕೆ ಕಂಟಕವಾಗಿ ಪರಿಣಮಿಸಿದ್ರು. ಅದರಲ್ಲೂ 17ನೇ ಓವರ್ ನಲ್ಲಿ ಪ್ರಮುಖ ಮೂರು ವಿಕೆಟ್ ಉರುಳಿಸಿ ಪಾಕ್ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡ್ರು. 55 ರನ್ ಗಳಿಸಿ ಅಪಾಯಕಾರಿಯಾಗಿದ್ದ ಮಹಮ್ಮದ್ ರಿಜ್ವಾನ್ ಅವರನ್ನು ಬಲಿ ಪಡೆದ ಹಸರಂಗ, ಆಸಿಫ್ ಆಲಿ ಶೂನ್ಯ ಸುತ್ತುವಂತೆ ಮಾಡಿದ್ರು. ಹಾಗೇ ಖಷ್ದಿಲ್ ಶಾ 2 ರನ್ ಗೆ ಸೀಮಿತವಾದ್ರು. ಹೀಗೆ ತನ್ನ 4 ಓವರ್ ಗಳ ಕೋಟಾದಲ್ಲಿ ಹಸರಂಗ 27 ರನ್ ನೀಡಿ ಮೂರು ವಿಕೆಟ್ ಗಳನ್ನು ಉರುಳಿಸಿದ್ರು.
ಒಟ್ಟಿನಲ್ಲಿ ಆರ್ ಸಿಬಿಯ ಆಟಗಾರ ಪಾಕ್ ಕೈಯಿಂದ ಗೆಲುವನ್ನು ಕಸಿದುಕೊಂಡು ಲಂಕಾ ತಂಡವನ್ನು ಏಷ್ಯಾದ ಚಾಂಪಿಯನ್ ತಂಡವಾಗುವಂತೆ ಮಾಡಿದ್ದಾರೆ ವನಿಂದು ಹಸರಂಗ