Virat Kohli – ರನ್ ಬರ.. ಆದ್ರೂ ಎಂಜಾಯ್ ಮೂಡ್ ನಲ್ಲಿದ್ದಾರೆ ಕಿಂಗ್ ಕೊಹ್ಲಿ..!

2018ರ ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಮಳೆಯನ್ನೇ ಸುರಿಸಿದ್ದ ವಿರಾಟ್ ಕೊಹ್ಲಿ 2021 ಮತ್ತು 2022ರಲ್ಲಿ ನೀರಸ ಪ್ರದರ್ಶನವನ್ನು ನೀಡಿದ್ದಾರೆ.
ಕ್ರಿಕೆಟ್ ಬದುಕಿನಲ್ಲೇ ಅತ್ಯಂತ ಕೆಟ್ಟ ಸಮಯವನ್ನು ಎದುರಿಸುತ್ತಿರುವ ವಿರಾಟ್ ಬ್ಯಾಟ್ ನಿಂದ ದೊಡ್ಡ ಮೊತ್ತದ ರನ್ ಗಳು ಬರುತ್ತಿಲ್ಲ. ಅಲ್ಲದೆ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲುತ್ತಿಲ್ಲ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ವಿರಾಟ್ ಕೆಟ್ಟ ಹೊಡೆತಗಳಿಗೆ ಮುಂದಾಗಿ ವಿಕೆಟ್ ಕೈಚೆಲ್ಲಿಕೊಂಡಿದ್ದಾರೆ.

ಅತ್ಯುತ್ತಮ ಶಾಟ್ಸ್ ಗಳ ಮೂಲಕವೇ ಗಮನ ಸೆಳೆಯುತ್ತಿದ್ರೂ ದ್ವಂದ್ವ ಮನಸ್ಸಿನಿಂದ ಆಡುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಿದ್ದಾರೆ.
ಅಂದ ಹಾಗೇ ವಿರಾಟ್ ಬ್ಯಾಟಿಂಗ್ ಕೌಶಲ್ಯ, ಫಿಟ್ ನೆಸ್, ಆಕ್ರಮಣಕಾರಿ ಪ್ರವೃತ್ತಿಯಲ್ಲಿ ಒಂಚೂರು ಬದಲಾವಣೆಯಾಗಿಲ್ಲ. ಆದ್ರೆ ಗೊಂದಲಗಳಿಂದ ಸುಲಭವಾಗಿ ಎದುರಾಳಿ ಬೌಲರ್ ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ.

ಈಗಾಗಲೇ ವಿರಾಟ್ ಕೊಹ್ಲಿ ಶತಕ ದಾಖಲಿಸದೇ ಎರಡುವರೆ ವರ್ಷ ಕಳೆದಿದೆ. ದೊಡ್ಡ ಮೊತ್ತದ ರನ್ ಗಳು ಬಂದಿಲ್ಲ. ಜೊತೆಗೆ ಮ್ಯಾಚ್ ವಿನ್ನಿಂಗ್ ಆಟ ಪ್ರದರ್ಶನವಾಗಿಲ್ಲ. ಹೀಗಾಗಿ ರನ್ ಬರ ಮತ್ತು ಕಳಪೆ ಫಾರ್ಮ್ ನಿಂದಾಗಿ ವಿರಾಟ್ ಕೊಹ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದ್ರೆ ವಿರಾಟ್ ಹಾವಭಾವ ನೋಡಿದ್ರೆ ಅವರು ಮಾನಸಿಕವಾಗಿ ಕುಗ್ಗಿ ಹೋಗಿಲ್ಲ. ದೊಡ್ಡ ಮೊತ್ತದ ರನ್ ಗಳಿಸದೇ ಇದ್ರೂ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮತ್ತೆ ಹಳೆಯ ಫಾರ್ಮ್ ಕಂಡುಕೊಳ್ಳುತ್ತೇನೆ ಎಂಬ ವಿಶ್ವಾಸ ಅವರಲ್ಲಿದೆ.

ಇನ್ನು ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ರೂ ಆಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಹ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗುತ್ತಿದ್ದಾರೆ. ಮೈದಾನದಲ್ಲಿ ಆಕ್ರಮಣಕಾರಿ ಪ್ರವೃತ್ತಿಯಿಂದಲೇ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪ್ರತಿ ಕ್ಷಣವನ್ನು ಕೂಡ ಎಂಜಾಯ್ ಮಾಡುತ್ತಿದ್ದಾರೆ.

ಹೌದು, ಟೀಮ್ ಇಂಡಿಯಾ ಏಕದಿನ ಸರಣಿ ಗೆದ್ದ ನಂತರ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಶಾಂಪೇನ್ ಬಾಟಲ್ ಹಿಡಿದುಕೊಂಡು ಕುಣಿದು ಕುಪ್ಪಳಿಸಿದ್ರು. ಪರಸ್ಪರ ಒಬ್ಬರ ಮೇಲೆ ಒಬ್ಬರು ಶಾಂಪೇನ್ ಚಿಮ್ಮಿಸುತ್ತಾ ಗೆಲುವಿನ ಸಂಭ್ರಮದಲ್ಲಿ ತೇಲಾಡಿದ್ರು.

ಅದರಲ್ಲೂ ವಿರಾಟ್ ಕೊಹ್ಲಿ ಯಾರನ್ನು ಬಿಡಲಿಲ್ಲ. ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರನ್ನು ಶಾಂಪೇನ್ ನಲ್ಲೇ ಸ್ನಾನ ಮಾಡಿಸಿದ್ದಾರೆ. ಶಿಖರ್ ಧವನ್, ಆರ್ಶಾದೀಪ್ ಸಿಂಗ್, ಜಸ್ಪ್ರಿತ್ ಬೂಮ್ರಾ ಅವರ ಜೊತೆ ಶಾಂಪೇನ್ ಜೊತೆ ಚೆಲ್ಲಾಟವಾಡಿದ್ರು.
ಅಷ್ಟೇ ಅಲ್ಲ, ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೂ ಶಾಂಪೇನ್ ಬಾಟಲ್ ನೀಡಲು ವಿರಾಟ್ ಹೋಗಿದ್ದರು. ಆದ್ರೆ ರವಿಶಾಸ್ತ್ರಿ ವಿರಾಟ್ ಕೈಯಿಂದ ಶಾಂಪೇನ್ ಬಾಟಲ್ ಪಡೆದುಕೊಂಡು ಮತ್ತೆ ವಿರಾಟ್ ಗೆ ಹಿಂತಿರುಗಿಸಿದ್ದರು.

ಇನ್ನೊಂದೆಡೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿಯ ಮಾಜಿ ಆಟಗಾರ ಮೋಯಿನ್ ಆಲಿ ಜೊತೆಗೂ ಮಾತುಕತೆ ನಡೆಸಿದ್ದರು. ಇವರಿಗೆ ಯುಜುವೇಂದ್ರ ಚಾಹಲ್ ಕೂಡ ಸಾಥ್ ನೀಡಿದ್ರು.

ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮೈದಾನದಿಂದ ಹೊರಗಡೆ ಏನು ನಡೆಯುತ್ತಿದೆ, ಯಾರು ಟೀಕೆ ಮಾಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ತನ್ನ ಆಟದತ್ತ ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿ ನಿರಾಸೆ, ನೋವು, ಬೇಸರ ಎಲ್ಲವೂ ಇದ್ರೂ ಕೂಡ ಅದನ್ನು ಒಂಚೂರು ವಿರಾಟ್ ತೋರಿಸಿಕೊಡುತ್ತಿಲ್ಲ.