ODI Ranking : ಪಾಕ್ ಹಿಂದಿಕ್ಕಿದ ಭಾರತಕ್ಕೆ ಮೂರನೇ ಸ್ಥಾನ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಗೆಲುವಿನ ಬಳಿಕ ಭಾರತ ಐಸಿಸಿ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವು, ಅಂಕಿ ಅಂಶಗಳ ಮೇಲು ಪರಿಣಾಮ ಬೀರಿದೆ. ಈ ಮೂಲಕ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ ಮೂರನೇ ಸ್ಥಾನ ತಲುಪಿದೆ.
109 ರೇಟಿಂಗ್ ಅಂಕಗಳೊಂದಿಗೆ ಭಾರತವು ಈಗ ಪಾಕಿಸ್ತಾನಕ್ಕಿಂತ (106) ಮುಂದಿದೆ. ಇದೇ ಸಮಯದಲ್ಲಿ, ನ್ಯೂಜಿಲೆಂಡ್ 128 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೋತರೂ 121 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಅಂತಿಮ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಚೊಚ್ಚಲ ಏಕದಿನ ಶತಕದ ನೆರವಿನಿಂದ ಭಾರತವು ಇಂಗ್ಲೆಂಡ್ ವಿರುದ್ಧ 2-1 ರಿಂದ ಸರಣಿಯನ್ನು ಗೆದ್ದುಕೊಂಡಿತು. ಈ ಸರಣಿಯ ಗೆಲುವಿನೊಂದಿಗೆ ಭಾರತ ತಂಡ ಇತ್ತೀಚಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಮುಂಬರುವ ವಾರಗಳಲ್ಲಿ ಇದು ಬದಲಾಗಬಹುದು, ಆರನೇ ಶ್ರೇಯಾಂಕದ ದಕ್ಷಿಣ ಆಫ್ರಿಕಾವು ಪ್ರಸ್ತುತ ಪಾಕಿಸ್ತಾನಕ್ಕಿಂತ ಕೇವಲ ಐದು ರೇಟಿಂಗ್ ಪಾಯಿಂಟ್ ಹಿಂದಿದೆ. ಇಂಗ್ಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಸರಣಿಯನ್ನು ಗೆದ್ದರೆ ನಾಲ್ಕನೇ ಸ್ಥಾನಕ್ಕೆ ಏರಬಹುದು.
ಇದೇ ಸಮಯದಲ್ಲಿ, ಭಾರತ ತಂಡವು ಈ ತಿಂಗಳ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ. ಸದ್ಯ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯ ಆಡುತ್ತಿದೆ. ನಂತರ ತಂಡವು ಆಗಸ್ಟ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ODI ಸರಣಿಯನ್ನು ಎದುರಿಸಲಿದೆ.