ಭಾರತ ಏಕದಿನ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಜೀವನದಲ್ಲಿ ಇದುವರೆಗೆ ಭಾರತದ ನೆಲದಲ್ಲಿ 99 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಆಡಲು ಮೈದಾನಕ್ಕೆ ಇಳಿದರೆ, ಇದು ಭಾರತದ ನೆಲದಲ್ಲಿ ಅವರ 100 ನೇ ಏಕದಿನ ಪಂದ್ಯವಾಗಲಿದೆ.
ವಿರಾಟ್ ಕೊಹ್ಲಿಗಿಂತ ಮೊದಲು ಕೇವಲ ನಾಲ್ಕು ಆಟಗಾರರು ಮಾತ್ರ ಭಾರತದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ತವರು ನೆಲದಲ್ಲಿ 100 ಏಕದಿನ ಪಂದ್ಯಗಳನ್ನು ಆಡಿದ ವಿಶ್ವದ 36 ನೇ ಕ್ರಿಕೆಟಿಗರಾಗುತ್ತಾರೆ. ಸಚಿನ್ ತೆಂಡೂಲ್ಕರ್ ತವರಿನಲ್ಲಿ 164 ಪಂದ್ಯಗಳನ್ನು ಆಡಿದ್ದು, ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 127 ಪಂದ್ಯಗಳನ್ನು ಆಡಿರುವ ಎಂಎಸ್ ಧೋನಿ ಎರಡನೇ, 113 ಏಕದಿನ ಆಡಿರುವ ಮೊಹಮ್ಮದ್ ಅಜರುದ್ದೀನ್ ಮೂರನೇ ಸ್ಥಾನದಲ್ಲಿದ್ದಾರೆ. ಸಿಕ್ಸರ್ ಕಿಂಗ್ ಖ್ಯಾತಿಯ ಯುವರಾಜ್ ಸಿಂಗ್ಯೀ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ತವರಿನಲ್ಲಿ 108 ಪಂದ್ಯ ಆಡಿದ್ದಾರೆ.
ವಿರಾಟ್ ಕೊಹ್ಲಿ ಭಾರತದಲ್ಲಿ ಇದುವರೆಗೆ 99 ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟು 5002 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ರನ್ಗಳ ಬಾರಿಸಿ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಭಾರತದಲ್ಲಿ 5000 ರನ್ ಗಳಿಸಿದ ಸಾಧನೆ ಮಾಡಿದರು. ಅವರು ತಮ್ಮ ನೆಲದಲ್ಲಿ ಕಡಿಮೆ ಇನ್ನಿಂಗ್ಸ್ನಲ್ಲಿ 5000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು.