ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾಗಿ 2 ವರ್ಷ ಕಳೆದಿದೆ. ವಯಸ್ಸು 40 ದಾಟಿದೆ. ಸೋಷಿಯಲ್ ಮೀಡಿಯಾದಿಂದ ಧೋನಿ ದೂರವೇ ಇದ್ದಾರೆ. ಆದರೂ ಧೋನಿ ಹಿಂದೆ ಬ್ರಾಂಡ್ಗಳು ಮುಗಿಬೀಳುತ್ತಿವೆ. ಕಳೆದ ಒಂದೇ ವಾರದಲ್ಲಿ 3 ಹೊಸ ಬ್ರಾಂಡ್ಗಳಿಗೆ ಧೋನಿ ರಾಯಭಾರಿಯಾಗಿ ಸಹಿ ಮಾಡಿದ್ದಾರೆ. ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ.
ಸಿಎಸ್ಕೆ ತಂಡ ಧೋನಿಯನ್ನು ಮೊದಲ ಆಯ್ಕೆಯಾಗಿ ಮಾಡಿಕೊಂಡಿತ್ತು. ಆದರೆ ತಂಡದ ಹಿತದೃಷ್ಟಿಯಿಂದ ಮೊದಲ ಆಯ್ಕೆಯ ಸಂಭಾವನೆ 15 ಕೋಟಿಯನ್ನು ರವೀಂದ್ರ ಜಡೇಜಾಗೆ ಬಿಟ್ಟುಕೊಟ್ಟು ತಾನು 12 ಕೋಟಿ ಸಂಭಾವನೆಯ 2ನೇ ಆಯ್ಕೆಯಲ್ಲಿ ಉಳಿದುಕೊಂಡಿದ್ದರು. ಆದರೆ ಈಗ ಬ್ರಾಂಡ್ಗಳ ಮೇಲೆ ಬ್ರಾಂಡ್ಗಳನ್ನು ಧೋನಿ ಪಡೆಯುತ್ತಿದ್ದಾರೆ. ಟರ್ಟಲ್ ಮಿಂಟ್, ಓರಿಯೋ, ಗಣೇಶ್ ಹೌಸಿಂಗ್ನಂತಹ ಅಂತರಾಷ್ಟ್ರೀಯ ಬ್ರಾಂಡ್ಗಳಿಗೆ ಧೋನಿ ಈಗ ರಾಯಭಾರಿಯಾಗಿದ್ದಾರೆ.
ಟರ್ಟಲ್ ಮಿಂಟ್ ಇನ್ಶುರೆನ್ಸ್ ಕಂಪನಿ ಧೋನಿ ಜೊತೆ 2 ವರ್ಷಗಳ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಓರಿಯೋದಲ್ಲಿ ಧೋನಿ ಜೊತೆ ಮಗಳು ಝಿವಾ ಕೂಡ ಕಾಣಿಸಿಕೊಂಡಿರುವುದು ವಿಶೇಷ. ಗಣೇಶ್ ಹೌಸಿಂಗ್ ಫೈನಾನ್ಸ್ ಧೋನಿ ಜೊತೆ 3 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಭಾರತದ ನಂಬರ್ 1 ಬ್ರಾಂಡ್ ಸಲೆಬ್ರಿಟಿ. ಆದರೆ ಟೀಮ್ ಇಂಡಿಯಾದ ನಾಯಕತ್ವ ಕಳೆದುಕೊಂಡ ಮೇಲೆ ಕೊಂಚ ಮಂಕಾಗಿದ್ದಾರೆ. ಆದರೆ ಧೋನಿ ನಿವೃತ್ತಿಯಾಗಿ 2 ವರ್ಷಗಳ ಬಳಿಕವೂ ಬ್ರಾಂಡ್ಗಳ ಡಾರ್ಲಿಂಗ್ ಆಗಿರುವುದು ಅಚ್ಚರಿಗೆ ಕಾರಣವಾಗಿದೆ.