Virat Kohli – ವೀಕ್ ನೆಸ್ ಬಹಿರಂಗಪಡಿಸಿದ್ದ ಮೈಕೆಲ್ ವಾನ್

ಬಹುಶಃ ವಿರಾಟ್ ಕೊಹ್ಲಿ ತನ್ನ ಕ್ರಿಕೆಟ್ ಬದುಕಿನಲ್ಲಿ ಇಷ್ಟೊಂದು ಹತಾಶೆ ಯಾವತ್ತೂ ಪಟ್ಟಿಲ್ಲ. ಸಾಲು ಸಾಲು ಪಂದ್ಯಗಳಲ್ಲಿ ವೈಫಲ್ಯ, ಶತಕದ ಬರ, ವಿಶ್ರಾಂತಿ ಪಡೆದು ಕಮ್ ಬ್ಯಾಕ್ ಮಾಡಿದ್ರೂ ವರ್ಕ್‍ಔಟ್ ಆಗುತ್ತಿಲ್ಲ.
ಕೆಲವು ವರ್ಷಗಳ ಹಿಂದೆ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದ ವಿರಾಟ್ ಕೊಹ್ಲಿ ಈಗ ಟೀಮ್ ಇಂಡಿಯಾಗೆ ಬೇಡವಾಗುತ್ತಿದ್ದಾರೆ. ವಿರಾಟ್ ಉಪಸ್ಥಿತಿಯೇ ತಂಡಕ್ಕೆ ಭಾರವಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಬಂದು ನಿಂತಿದೆ ಚೇಸಿಂಗ್ ಗಾಡ್ ನ ಪರಿಸ್ಥಿತಿ.
ಹಾಗಂತ ಕ್ರಿಕೆಟ್ ಜಗತ್ತಿನಲ್ಲಿ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದು ವಿರಾಟ್ ಮೊದಲಿಗಲ್ಲ. ಕೊನೆಯವರೂ ಅಲ್ಲ. ದಿಗ್ಗಜ ಕ್ರಿಕೆಟಿಗರು ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿ ಹೊರಬಂದಿದ್ದಾರೆ. ಹಾಗೇ ವಿರಾಟ್ ಕೊಹ್ಲಿ ಕೂಡ ಕಳಪೆ ಫಾರ್ಮ್‍ನಿಂದ ಹೊರಬರುತ್ತಾರೆ ಅನ್ನೋ ನಂಬಿಕೆ ಇದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸತತ ಮೂರು ಸೊಗಸಾದ ಬೌಂಡರಿಗಳನ್ನು ಸಿಡಿಸಿದ್ದರು. ಅದನ್ನು ನೋಡಿದಾಗ ಎಲ್ಲರೂ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳುತ್ತಾರೆ ಎಂದು ಭಾವಿಸಿದ್ದರು. ಯಾಕಂದ್ರೆ ವಿರಾಟ್ ಆಟದ ಖದರ್ ಆ ರೀತಿಯಲ್ಲಿತ್ತು.

ಆದ್ರೆ ವಿರಾಟ್ ಆಟ ಹೆಚ್ಚು ಸಮಯ ನಡೆಯಲಿಲ್ಲ. 25 ಎಸೆತಗಳಲ್ಲಿ 16 ರನ್ ಗಳಿಗೆ ಔಟಾದ್ರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್, ವಿರಾಟ್ ಆಟದಲ್ಲಿ ಯಾವುದೇ ದೋಷವಿಲ್ಲ. ಬ್ಯಾಟಿಂಗ್ ಕೌಶಲ್ಯದಲ್ಲೂ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಹಾಗಿದ್ರೆ ಸಮಸ್ಯೆ ಇರೋದು ಎಲ್ಲಿ ಎಂಬುದಕ್ಕೆ ಮೈಕೆಲ್ ವಾನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನಾನು ಪ್ರತಿ ಬಾರಿ ನೋಡುತ್ತೇನೆ. ಅವರು ಸರಿಯಾಗಿಯೇ ಇರುತ್ತಾರೆ. ಆದ್ರೆ ಔಟಾಗುತ್ತಿರುವ ರೀತಿ ನೋಡಿದ್ರೆ ಅಚ್ಚರಿಯಾಗುತ್ತದೆ. ಅವರ ಚಲನವಲನ ಹಾಗೂ ತಾಂತ್ರಿಕ ಸಮಸ್ಯೆಯಂತೂ ನನಗೆ ಕಾಣುತ್ತಿಲ್ಲ. ಆದ್ರೆ ಏಕಾಗ್ರತೆಯ ಕೊರತೆ ಅವರಲ್ಲಿ ಕಾಣುತ್ತಿದೆ ಎಂದು ಮೈಕೆಲ್ ವಾನ್ ಹೇಳಿದ್ದಾರೆ.

ಏಕಾಗ್ರತೆಯ ಜೊತೆಗೆ ಮಾನಸಿಕವಾಗಿ ಸದೃಢವಾಗಿರಬೇಕು. ಯಾಕಂದ್ರೆ ಪ್ರತಿ ಎಸೆತಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ಅರಿತುಕೊಳ್ಳಬೇಕು. ಈ ವಿಚಾರದಲ್ಲೇ ವಿರಾಟ್ ಕೊಹ್ಲಿ ಎಡವುತ್ತಿದ್ದಾರೆ. ಏಕಾಗ್ರತೆ ಸಾಧಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ಮೈಕೆಲ್ ವಾನ್ ಅವರ ಅಭಿಮತವಾಗಿದೆ.
ಇನ್ನು ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್, ವಿರಾಟ್ ವಿಶ್ರಾಂತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಒಪ್ಪುವುದಿಲ್ಲ.
ವಿರಾಟ್ ಏನು ಮಾಡಬೇಕು ಎಂಬುದನ್ನು ಅವರೇ ನಿರ್ಧಾರ ತೆಗೆದುಕೊಳ್ಳಬೇಕು. ವಿಶ್ರಾಂತಿ ಪಡೆದುಕೊಳ್ಳಬೇಕಾ ಅಥವಾ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಬೇಕು ಎಂಬುದನ್ನು ಕೊಹ್ಲಿಯೇ ನಿರ್ಧರಿಸಬೇಕು. ಅದು ಅವರ ವೈಯಕ್ತಿಕ ತೀರ್ಮಾನ ಎಂದು ಜಹೀರ್ ಖಾನ್ ಹೇಳಿದ್ದಾರೆ.