Virat Kohli – ವಿರಾಟ್ ಡ್ರಾಪ್ ಮಾಡುವ ತಾಕತ್ತು ಆಯ್ಕೆ ಸಮಿತಿಗಿಲ್ಲ.!

ವಿರಾಟ್ ಕೊಹ್ಲಿ ತನ್ನ ಕಳಪೆ ಬ್ಯಾಟಿಂಗ್ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡಿರುವುದು ನಿಜ. ಹಾಗೇ ಟೀಮ್ ಇಂಡಿಯಾ, ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್, ಆಯ್ಕೆ ಸಮಿತಿ, ಬಿಸಿಸಿಐ ಜೊತೆಗೆ ವಿರಾಟ್ ಅಭಿಮಾನಿಗಳು ಚಿಂತೆಯಲ್ಲಿರುವುದು ಕೂಡ ಸಹಜ. ಈಗಾಗಲೇ ವಿರಾಟ್ ಕೊಹ್ಲಿಯವರ ಬೆಂಬಲಕ್ಕೆ ಕ್ರಿಕೆಟ್ ಜಗತ್ತಿನ ಮಾಜಿ ಅಟಗಾರರು ನಿಂತಿದ್ದಾರೆ.
ಇನ್ನೊಂದೆಡೆ ವಿರಾಟ್ ಕೊಹ್ಲಿಯವರನ್ನು ಟೀಮ್ ಇಂಡಿಯಾದ ಟಿ-20 ತಂಡದಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಕಾರಣವೂ ಇದೆ. ಆಟದಲ್ಲಿ ಆಟಗಾರರು ಏರಿಳಿತಗಳನ್ನು ಕಾಣುವುದು ಸಹಜ. ಅದೇ ರೀತಿ ವಿರಾಟ್ ಕೊಹ್ಲಿ ಕೂಡ ತನ್ನ ಕ್ರಿಕೆಟ್ ಬದುಕಿನಲ್ಲಿ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ. ಸಚಿನ್, ಗಂಗೂಲಿ, ದ್ರಾವಿಡ್ ನಂತಹ ಆಟಗಾರರೇ ಫಾರ್ಮ್ ಕಳೆದುಕೊಂಡು ಪರದಾಡಿದ್ದು ಇದೆ. ಆದ್ರೆ ಇವರೆಲ್ಲಾ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ ಕೂಡ ಕಮ್ ಬ್ಯಾಕ್ ಮಾಡಿಯೇ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ಈ ನಡುವೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಟಿ-20 ತಂಡಕ್ಕೆ ಅನಿವಾರ್ಯನಾ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಕೆಲವರ ಪ್ರಕಾರ ವಿರಾಟ್ ನಂತಹ ಆಟಗಾರರು ಬೇಕು ಎಂದು ವಾದಿಸಿದ್ರೆ, ಮತ್ತೆ ಕೆಲವರು ವಿರಾಟ್ ಬದಲು ದೀಪಕ್ ಹೂಡಾ ಸೇರಿದಂತೆ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹೇಳುತ್ತಿದ್ದಾರೆ.

ಇನ್ನೊಂದೆಡೆ ವಿರಾಟ್ ಪರ ಮತ್ತು ವಿರೋಧದ ಟೀಕೆಗಳು ಕೇಳಿಬರುತ್ತಿವೆ. ಪಕ್ಕದ ಪಾಕಿಸ್ತಾನ ಕ್ರಿಕೆಟಿಗರು ಕೂಡ ವಿರಾಟ್ ಗೆ ಬೆಂಬಲವಾಗಿ ನಿಂತಿದ್ದಾರೆ. ಆದ್ರೆ ಭಾರತದ ಕೆಲವು ಮಾಜಿ ಆಟಗಾರರು ವಿರಾಟ್ ತಂಡದಲ್ಲಿರುವುದು ಬೇಡ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ನಿಮಗೆ ಗೊತ್ತಿರುವ ಹಾಗೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಕೂಡ ಟ್ವಿಟರ್ ನಲ್ಲಿ ವಿರಾಟ್ ಗೆ ಬೆಂಬಲ ಸೂಚಿಸಿದ್ದಾರೆ.
ಇದಕ್ಕೆ ಪೂರಕವಾಗಿ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ರಶೀದ್ ಲತೀಫ್ ಅವರು ವಿರಾಟ್ ಕೊಹ್ಲಿಯರವನ್ನು ತಂಡದಿಂದ ಕೈಬಿಡಬೇಕು ಎಂದು ಹೇಳಿದವರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿಯವರನ್ನು ತಂಡದಿಂದ ಕೈಬಿಡುವ ಆಯ್ಕೆ ಸಮಿತಿ ಸದಸ್ಯರು ಯಾರು ಕೂಡ ಭಾರತದಲ್ಲಿ ಹುಟ್ಟಿಲ್ಲ ಎಂದು ರಶೀದ್ ಲತೀಫ್ ಹೇಳಿದ್ದಾರೆ.

ರಶೀದ್ ಲತೀಫ್ ಹೇಳಿಕೆ ತುಸು ಅಚ್ಚರಿಯನುಂಟು ಮಾಡಿದೆ. ಅಲ್ಲದೆ ವಿರಾಟ್ ಎಂಥ ಆಟಗಾರ ಎಂಬುದು ಅವರಿಗೂ ಮನವರಿಕೆಯಾಗಿದೆ. ಆದ್ರೂ ವಿರಾಟ್ ಕೊಹ್ಲಿಯವರ ಸದ್ಯದ ಫಾರ್ಮ್ ನೋಡಿದ್ರೆ ತಂಡದಲ್ಲಿ ಸ್ಥಾನ ಸಿಗೋದು ಅನುಮಾನ. ಯಾಕಂದ್ರೆ ವಿರಾಟ್ ಫಾರ್ಮ್ ಕಂಡುಕೊಳ್ಳಬೇಕಾದ್ರೆ ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಿದೆ. ಅದರಲ್ಲೂ ಮಾನಸಿಕವಾಗಿ ಸದೃಢಗೊಳ್ಳಬೇಕಿದೆ. ಹೀಗಾಗಿ ಸ್ವಲ್ಪ ಸಮಯದ ಅಗತ್ಯವೂ ಇದೆ. ಜೊತೆಗೆ ಸತತ ವಿಶ್ರಾಂತಿ ಪಡೆದುಕೊಳ್ಳುತ್ತಿರುವುದು ಕೂಡ ಸರಿಯಾದ ಮಾರ್ಗವಲ್ಲ.
ಆದ್ರೆ ಒಂದು ನೆನಪಿಡಿ.. ಬಿಸಿಸಿಐ ಆಯ್ಕೆ ಸಮಿತಿ ಖಡಕ್ ನಿರ್ಧಾರವನ್ನು ತೆಗೆದುಕೊಂಡಿದೆ. ತೆಗೆದುಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ, ಕಿರಣ್ ಮೋರೆ, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ ಸರ್ಕಾರ್, ಪ್ರಸಾದ್ ನಂತಹ ಆಯ್ಕೆ ಸಮಿತಿಯ ಸದಸ್ಯರು ವಿಶ್ವದ ಶ್ರೇಷ್ಠ ಕ್ರಿಕೆಟಿಗರನ್ನೇ ತೆರೆಮರೆಗೆ ಸರಿಯುವಂತೆ ಮಾಡಿದ್ದಾರೆ. ಅಂದ ಮೇಲೆ ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರಿಗೆ ನಿರ್ಧಾರ ತೆಗೆದುಕೊಳ್ಳುವುದು ದೊಡ್ಡ ಕಷ್ಟವೇನೂ ಅಲ್ಲ. ಅಷ್ಟಕ್ಕೂ ಸದ್ಯದ ಮಟ್ಟಿಗೆ ವಿರಾಟ್ ಕೊಹ್ಲಿಯವರನ್ನು ತಂಡದಿಂದ ತೆಗೆದು ಹಾಕುವ ನಿರ್ಧಾರ ಕೂಡ ಸರಿಯಲ್ಲ. ಯಾಕಂದ್ರೆ, ವಿರಾಟ್ ಕೊಹ್ಲಿ ಆಡಲಿ, ಆಡದೇ ಇರಲಿ, ತಂಡದಲ್ಲಿದ್ರೆ ಸಾಕು. ಎದುರಾಳಿ ತಂಡಕ್ಕೆ ಭಯವನ್ನುಂಟು ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.