ಗ್ರಹಚಾರ ಕೆಟ್ರೆ ಹಗ್ಗ ಕೂಡ ಹಾವಾಗಿ ಕಡಿಯುತ್ತೆ ಅನ್ನುವ ಮಾತಿದೆ. ಟೀಮ್ಇಂಡಿಯಾದ (Team India)ಮಾಜಿ ನಾಯಕ ವಿರಾಟ್ ಕೊಹ್ಲಿಗೆ(Virat Kohli) ಈ ಮಾತು ಅಕ್ಷರಶಃ ಒಪ್ಪುತ್ತದೆ. ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾಗ ಎಲ್ಲವೂ ಚೆನ್ನಾಗಿತ್ತು. ವಿರಾಟ್ಗಿಂತ ಬೇರೆ ಆಟಗಾರರು ಯಾರು ಇರಲಿಲ್ಲ ಎಂದು ಅನಿಸುತ್ತಿತ್ತು. ಆದರೆ ಈಗ ವಿರಾಟ್ ಫಾರ್ಮ್ ಕಳೆದುಕೊಂಡಿದ್ದಾರೆ. ಟೀಕೆಗಳನ್ನು ಎದುರಿಸುತ್ತಿದ್ದಾರೆ.
70 ಅಂತರಾಷ್ಟ್ರೀಯ ಶತಕ ದಾಖಲಿಸುವ ತನಕ ವಿರಾಟ್ಗೆ ಎಲ್ಲವೂ ಒಳ್ಳೆಯದ್ದೇ ಆಗಿತ್ತು. ಅವರ ಬ್ಯಾಟಿಂಗ್ ಬಗ್ಗೆ ಮಾತೆತ್ತುವವರು ಇರಲಿಲ್ಲ. ಸ್ಟೈಲ್ ಮತ್ತು ತಾಂತ್ರಿಕತೆಯ ಬಗ್ಗೆ ಹೊಗಳಿದವರೇ ಹೆಚ್ಚು. ಫೂಟ್ ವರ್ಕ್ಸ್, ಹ್ಯಾಂಡ್ ಐ ಕೊ-ಆರ್ಡಿನೇಷನ್ ಎಲ್ಲದಕ್ಕೂ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು. ಆದರೆ ಯಾವಾಗ ಶತಕಗಳ ಬರ ಎದುರಾಯಿತೋ ಅಂದಿನಿಂದ ಎಲ್ಲವೂ ಬದಲಾಯಿತು.

ಸಚಿನ್ ತೆಂಡುಲ್ಕರ್ (Sachin Tendulkar), ರಿಕಿ ಪಾಂಟಿಗ್ (Ricky Ponting), ರಾಹುಲ್ ದ್ರಾವಿಡ್ (Rahul Dravid), ಸೌರವ್ ಗಂಗೂಲಿ(Sourav Ganguly) ಹೀಗೆ ಬ್ಯಾಟಿಂಗ್ ದಂತಕಥೆಗಳು ಬ್ಯಾಟಿಂಗ್ ಫಾರ್ಮ್ ಬರ ಎದುರಿಸಿದ್ದರು. ಆದರೆ ಅದಕ್ಕೆ ಪರಿಹಾರ ಕಂಡುಕೊಂಡಿದ್ದರು. ಅಲ್ಲಿ ತನಕ ಅವರಿಗೂ ಒತ್ತಡವಿತ್ತು. ಈಗ ವಿರಾಟ್ ಕಥೆಯೂ ಅಷ್ಟೇ. ಒಂದು ಶತಕ ಅಥವಾ ಒಂದು ಅದ್ಭುತ ಇನ್ನಿಂಗ್ಸ್ ಎಲ್ಲವನ್ನೂ ಬದಲಿಸಬಲ್ಲದು. ಆದರೆ ಅಲ್ಲಿ ತನಕ ತಾಳ್ಮೆ ಇರಬೇಕು ಅಷ್ಟೇ.
