ಭರ್ಜರಿ ಫಾರ್ಮ್ನಲ್ಲಿರುವ ಟೀಂ ಇಂಡಿಯಾ(Team India) ಹಾಗೂ ಕಮ್ಬ್ಯಾಕ್ ತವಕದಲ್ಲಿರುವ ಅತಿಥೇಯ ಇಂಗ್ಲೆಂಡ್(England) ನಡುವಿನ 2ನೇ ODI ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದ್ದು, ಟಾಸ್ ಗೆದ್ದಿರುವ ಭಾರತ ಮತ್ತೊಮ್ಮೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿರುವ ಸರಣಿಯ ನಿರ್ಣಾಯಕ ಪಂದ್ಯಕ್ಕಾಗಿ ಉಭಯ ತಂಡಗಳು ತಮ್ಮದೇ ರಣತಂತ್ರ ರೂಪಿಸಿಕೊಂಡಿವೆ. ಮೊದಲ ಪಂದ್ಯದಲ್ಲಿ ದೊರೆತ ಭರ್ಜರಿ 10 ವಿಕೆಟ್ಗಳ ಗೆಲುವಿನಿಂದ ಹೊಸ ಉತ್ಸಾಹದಲ್ಲಿರುವ ಟೀಂ ಇಂಡಿಯಾ, ಇಂದಿನ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ(Virat Kohli), ಪ್ಲೇಯಿಂಗ್ ಇಲವೆನ್ಗೆ ಮರಳಿರುವುದು ತಂಡದ ಬಲವನ್ನ ಹೆಚ್ಚಿಸಿದೆ. ಉಳಿದಂತೆ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ಆದರೆ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಅತಿಥೇಯ ಇಂಗ್ಲೆಂಡ್, ಸ್ಟ್ರಾಂಗ್ ಕಮ್ಬ್ಯಾಕ್ ಮಾಡುವ ನಿರೀಕ್ಷೆ ಹೊಂದಿದೆ. ಟೀಂ ಇಂಡಿಯಾದ ಪರಿಣಾಮಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠ ಪ್ರದರ್ಶನ ನೀಡುವ ತವಕದಲ್ಲಿದೆ. ಮೊದಲ ಪಂದ್ಯದ ಸೋಲಿನ ನಡುವೆಯೂ ಅತಿಥೇಯ ಇಂಗ್ಲೆಂಡ್ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯುತ್ತಿದೆ.
ಕೊಹ್ಲಿ ಮೇಲೆ ಎಲ್ಲರ ಕಣ್ಣು:
ಕಳೆದ ಹಲವು ದಿನಗಳಿಂದ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನಲ್ಲಿ ರನ್ಗಳಿಸುವಲ್ಲಿ ಮುಗ್ಗರಿಸುತ್ತಿರುವ ವಿರಾಟ್ ಕೊಹ್ಲಿ, ಇಂದಿನ ಪಂದ್ಯದಲ್ಲಿ ಯಾವ ರೀತಿ ಕಮ್ಬ್ಯಾಕ್ ಮಾಡುತ್ತಾರೆಂಬುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಯುಜ಼ುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ.
ಇಂಗ್ಲೆಂಡ್ ತಂಡ:
ಜೇಸನ್ ರಾಯ್, ಜಾನಿ ಬೈರ್ಸ್ಟೋವ್, ಜೋ ರೂಟ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್(ನಾಯಕ), ಲಿಯಮ್ ಲಿವಿಂಗ್ಸ್ಟೋನ್, ಮೊಯಿನ್ ಅಲಿ, ಕ್ರೇಗ್ ಓವರ್ಟನ್, ಡೇವಿಡ್ ವಿಲ್ಲಿ, ಬ್ರೈಡನ್ ಕಾರ್ಸ್, ರೀಸ್ ಟಾಪ್ಲೆ.