Virat Kohli – ಸಮಸ್ಯೆಗೆ ಪರಿಹಾರ ಒಂದೇ -ಬಾಲ್ಯದ ಕೋಚ್ ಹೇಳಿದ್ದೇನು ?

ಇಂಗ್ಲೆಂಡ್ ಪ್ರವಾಸವನ್ನು ಟೀಮ್ ಇಂಡಿಯಾ ಸಿಹಿಯಾದ ಅನುಭವದೊಂದಿಗೆ ಮುಗಿಸಿದೆ. ಟೆಸ್ಟ್ ಪಂದ್ಯದ ಸೋಲು ಕಹಿಯನ್ನುಂಟು ಮಾಡಿದ್ರೂ ಟಿ-20 ಮತ್ತು ಏಕದಿನ ಕ್ರಿಕೆಟ್ ಸರಣಿಯ ಗೆಲುವು ರೋಹಿತ್ ಬಳಗದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಆದ್ರೂ ಟೀಮ್ ಇಂಡಿಯಾ ಕೆಲವೊಂದು ವಿಭಾಗದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ. ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಸಬೇಕಿದೆ. ಇದು ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಕಲಿತಿರುವ ಪಾಠ.
ಆದ್ರೆ ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯನ್ನುಂಟು ಮಾಡಿರೋದು ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್. ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಆಡಿರುವ ಅರು ಇನಿಂಗ್ಸ್ ಗಳಲ್ಲಿ ದಾಖಲಿಸಿರುವುದು ಕೇವಲ 75 ರನ್ ಮಾತ್ರ.

ಹಾಗೇ ನೋಡಿದ್ರೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿಲ್ಲ. ಆಟದಲ್ಲೂ ಯಾವುದೇ ರೀತಿಯ ಸಮಸ್ಯೆಗಳು ಕಾಣುತ್ತಿಲ್ಲ. ಬ್ಯಾಟಿಂಗ್ ಕೌಶಲ್ಯಗಳು ಪರ್ಫೆಕ್ಟ್ ಆಗಿವೆ. ಮಾನಸಿಕ ಮತ್ತು ದೈಹಿಕವಾಗಿಯೂ ಸಮರ್ಥರಾಗಿದ್ದಾರೆ. ಆದ್ರೂ ವಿರಾಟ್ ದೊಡ್ಡ ಮೊತ್ತದ ರನ್ ಯಾಕೆ ಗಳಿಸುತ್ತಿಲ್ಲ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಇದೀಗ ವಿರಾಟ್ ಕೊಹ್ಲಿ ಅವರ ಸಮಸ್ಯೆಯನ್ನು ಬಗೆ ಹರಿಸಲು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಪರಿಹಾರವನ್ನು ಸೂಚಿಸಿದ್ದಾರೆ.
ಹೌದು, ವಿರಾಟ್ ಕೊಹ್ಲಿ ಅವರನ್ನು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಅವರು ಅಕಾಡೆಮಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಅತ್ಯುತ್ತಮ ಎಸೆತಗಳಿಗೆ ಅವರು ಔಟಾಗಿದ್ದಾರೆ. ಬಹುಶಃ ಆ ಎಸೆತಗಳು ವಿರಾಟ್ ಆಟಕ್ಕಿಂತ ಉತ್ತಮವಾಗಿದ್ದವು. ಆದ್ರೆ ವಿರಾಟ್ ನಮ್ಮ ಅಕಾಡೆಮಿಗೆ ಬಂದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಈ ಅಕಾಡೆಮಿ ಅವರದ್ದೇ ಮೈದಾನವಾಗಿದೆ. ಇಲ್ಲಿಯವರೆಗೆ ಅವರಿಗೆ ಸಮಯವಿರಲಿಲ್ಲ. ಈಗ ಸಮಯವಿದೆ. ಹೀಗಾಗಿ ಅವರು ಇಲ್ಲಿಗೆ ಬಂದು ಸ್ವಲ್ಪ ಸಮಯ ಅಭ್ಯಾಸ ನಡೆಸಿದ್ರೆ ಎಲ್ಲವೂ ಸರಿ ಹೋಗುತ್ತದೆ. ಇಲ್ಲಿನ ವಾತಾವರಣ ಅವರಿಗೆ ಹಿತಾನುಭವವನ್ನು ನೀಡಬಹುದು ಎಂದು ರಾಜ್ ಕುಮಾರ್ ಶರ್ಮಾ ಅವರು ವಿರಾಟ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.
ಆದ್ರೆ ವಿರಾಟ್ ಕೊಹ್ಲಿ ತನ್ನ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ ಅವರ ಆಹ್ವಾನವನ್ನು ಪರಿಗಣಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ಯಾಕಂದ್ರೆ ವಿರಾಟ್ ಕೊಹ್ಲಿ ಸದ್ಯ ಇಂಗ್ಲೆಂಡ್ ನಲ್ಲೇ ಉಳಿದುಕೊಳ್ಳಲು ನಿರ್ಧಾರ ಮಾಡಿದ್ದಾರೆ. ಅಲ್ಲದೆ ಅವರ ತಾಯಿ ಕೂಡ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತನ್ನ ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ. ಬಹುಶಃ ಏಷ್ಯಾ ಕಪ್ ಟೂರ್ನಿಯ ವೇಳೆ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.