Virat Kohli – ಕಿಂಗ್ ಈಸ್ ಬ್ಯಾಕ್.. ಅಸಲಿ ಆಟ ಇನ್ನು ಶುರು..!
ಕಿಂಗ್ ಈಸ್ ಬ್ಯಾಕ್… ಹೌದು, ಇಷ್ಟು ದಿನ ಸೈಲೆಂಟ್ ಆಗಿದ್ದ ಆಧುನಿಕ ಕ್ರಿಕೆಟ್ ನ ಸುಲ್ತಾನ, ಸಡನ್ ಆಗಿ ವಾಲೈಂಟ್ ಆದಾಗ ಕ್ರಿಕೆಟ್ ಜಗತ್ತಿನಲ್ಲಿ ಕೇಳಿಬರುತ್ತಿರುವ ಮೊದಲ ಮಾತೇ ಕಿಂಗ್ ಈಸ್ ಬ್ಯಾಕ್. ಅಸಲಿ ಆಟ ಇನ್ನೂ ಶುರು..!
ನಿಜ, ವಿರಾಟ್ ಕೊಹ್ಲಿ ಅಫಘಾನಿಸ್ತಾನ ವಿರುದ್ಧ ಶತಕ ದಾಖಲಿಸಿರಬಹುದು. ಆದ್ರೆ ಈ ಶತಕ ವಿರಾಟ್ ಪಾಲಿಗೆ ಮಹತ್ವದ ಶತಕವಾಗಿತ್ತು. 1021 ದಿನಗಳ ನಂತರ ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಅನ್ನು ಮೇಲೇತ್ತಿ ಆಗಸದತ್ತ ದಿಟ್ಟಿಸಿ ನೋಡಿದ್ದು. ಈ ಕ್ಷಣಕ್ಕಾಗಿ ವಿರಾಟ್ ಕೊಹ್ಲಿ ಪಟ್ಟ ಕಷ್ಟ, ನೋವು, ಕಣ್ಣೀರು, ನಿರಾಸೆ ಅಷ್ಟಿಷ್ಟಲ್ಲ.
ಜೊತೆಗೆ ಟೀಕೆ, ಆರೋಪಗಳು.. ಇನ್ನು ಕೆಲವರು ವಿರಾಟ್ ಕೊಹ್ಲಿ ಕ್ರಿಕೆಟ್ ಆಟ ಮುಗಿದೇ ಹೋಯ್ತು ಅಂತ ಹೇಳಿಬಿಟ್ಟಿದ್ದರು. ಯಾಕಂದ್ರೆ ವಿರಾಟ್ ಅಷ್ಟರ ಮಟ್ಟಿಗೆ ರನ್ ಬರ ಎದುರಿಸುತ್ತಿದ್ದರು. ಫಿಟ್ ನೆಸ್, ಬ್ಯಾಟಿಂಗ್ ಕೌಶಲ್ಯಗಳು ಇದ್ರೂ ಕೂಡ ಕೆಟ್ಟದಾಗಿ ಔಟಾಗಿ ಹೋಗುತ್ತಿದ್ದರು. ಇದು ಸ್ವತಃ ವಿರಾಟ್ ಕೊಹ್ಲಿಯವರನ್ನೇ ಸಹ ಮಾನಸಿಕವಾಗಿ ಕುಗ್ಗಿ ಹೋಗುವಂತೆ ಮಾಡಿತ್ತು.
ಸಾಲು ಸಾಲು ಪಂದ್ಯಗಳ ವೈಫಲ್ಯದಿಂದ ವಿರಾಟ್ ಕೊಹ್ಲಿ ಮೌನಕ್ಕೆ ಶರಣಾಗಿದ್ದರು. ಯಾಕಂದ್ರೆ ವಿರಾಟ್ ಗೆ ಗೊತ್ತಿತ್ತು. ಏನು ಹೇಳಿದ್ರೂ ಪ್ರಯೋಜನ ಇಲ್ಲ ಅಂತ. ಆದ್ರೆ ಕಳೆದು ಕೊಂಡಿದ್ದ ಫಾರ್ಮ್ ಅನ್ನು ಕಂಡುಕೊಳ್ಳಲು ಬೇಕಾಗಿರೋದು ಒಂದೇ ಒಂದು ಇನಿಂಗ್ಸ್ ಎಂಬುದು. ಅದನ್ನು ಬಕ ಪಕ್ಷಿಯಂತೆ ಕಾಯುತ್ತಿದ್ದರು. ಏಷ್ಯಾಕಪ್ ನಲ್ಲಿ ಅತ್ಯುತ್ತಮ ಲಯದಲ್ಲಿದ್ದ ವಿರಾಟ್ ಕೊಹ್ಲಿ ಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು.
ಹೀಗಾಗಿ ಅಫಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ವಿರಾಟ್ ಮೇಲೆ ಅಷ್ಟೊಂದು ನಿರೀಕ್ಷೆಗಳು ಇರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ್ದು ಅರ್ಧಶತಕ ದಾಖಲಿಸಿದ್ರೂ ಶತಕ ಸಿಡಿಸ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅದಕ್ಕೂ ಕಾರಣವಿದೆ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಮೇಲೆ ಯಾರು ನಂಬಿಕೆಯನ್ನಿಡುತ್ತಿರಲಿಲ್ಲ. ಆ ನಂಬಿಕೆಯೇ ಹೊರಟು ಹೋಗಿತ್ತು.
ಆದ್ರೆ ವಿರಾಟ್ ನೋಡ ನೋಡುತ್ತಿದ್ದಂತೆ ಅಫಘನ್ ಬೌಲರ್ ಗಳ ಮೇಲೆ ಸವಾರಿ ಮಾಡಿದ್ರು. ಬೌಂಡರಿ ಸಿಕ್ಸರ್ ಗಳನ್ನು ದಾಖಲಿಸುತ್ತಾ ಟಿ-20 ಕ್ರಿಕೆಟ್ ನಲ್ಲಿ ಚೊಚ್ಚಲ ಶತಕದ ಸಂಭ್ರಮದಲ್ಲಿ ತೇಲಾಡಿದ್ರು. ಸುಮಾರು 14 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿ ತನ್ನ ಕ್ರಿಕೆಟ್ ಬದುಕಿನಲ್ಲಿ ಮರು ಜನ್ಮವನ್ನು ಪಡೆದುಕೊಂಡ್ರು.
ಈ ಶತಕ ಸ್ವತಃ ವಿರಾಟ್ ಕೊಹ್ಲಿಗೂ ಅಚ್ಚರಿಯನ್ನುಂಟು ಮಾಡಿತ್ತು. ನಗು ನಗುತ್ತಲೇ ಶತಕದ ಸಂಭ್ರಮವನ್ನು ಆಚರಿಸಿಕೊಂಡ ವಿರಾಟ್ ಮುಖದಲ್ಲಿ ಹೊಸ ಮಂದಾಹಾಸ ಮೂಡುವಂತೆ ಮಾಡಿತ್ತು. ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದಾಗ ಆಕ್ರಮಣಕಾರಿ ಪ್ರವೃತ್ತಿ ಎದ್ದು ಕಾಣುತ್ತಿತ್ತು. ಆದ್ರೆ ಈ ಶತಕದಲ್ಲಿ ಅಂತಹ ಮನೋಭಾವನೆ ಇರಲಿಲ್ಲ.
60 ಎಸೆತಗಳಲ್ಲಿ 12 ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ಅಜೇಯ 122 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, ಟಿ-20 ಕ್ರಿಕೆಟ್ ನಲ್ಲಿ ಭಾರತದ ಪರ ವೈಯಕ್ತಿಕವಾಗಿ ಗರಿಷ್ಠ ರನ್ ಗಳಿಸಿದ್ದ ಆಟಗಾರನಾಗಿಯೂ ಹೊರಹೊಮ್ಮಿದ್ರು.
ಒಟ್ಟಿನಲ್ಲಿ ವಿರಾಟ್ ರನ್ ಬರ ಈಗ ಮುಗಿದು ಹೋದ ಅಧ್ಯಾಯ. ಇನ್ನು ವಿರಾಟ್ ಹವಾ ಶುರುವಾಗೋದು ಖಚಿತ. ಅಸಲಿ ಆಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ವಿರಾಟ್ ನಡೆದದ್ದೇ ದಾರಿ.. ಆಡಿದ್ದೇ ಆಟ.. ಟಿ-20 ಕಪ್ ನಮ್ದೇನಾ…! ನೋಡೋಣ..