Neeraj Chopra – ಭಾರತದ ಸೂಪರ್ ಸ್ಟಾರ್ ಈಗ ಡೈಮಂಡ್ ಲೀಗ್ ಚಾಂಪಿಯನ್..!

ಭಾರತದ ಸೂಪರ್ ಸ್ಟಾರ್ ನೀರಜ್ ಚೋಪ್ರಾ ಅವರು ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಝೂರಿಚ್ ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರೀಡಾಪಟು ಎಂಬ ಗೌರವಕ್ಕೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.
ಹಾಗೇ ನೋಡಿದ್ರೆ, ನೀರಜ್ ಚೋಪ್ರಾ ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ನೀರಜ್ ಅವರು ಮೊದಲ ಪ್ರಯತ್ನದಲ್ಲಿ 88.44 ಮೀಟರ್ ದೂರ ಎಸೆದಿದ್ದರು. ನಂತರದ ಪ್ರಯತ್ನಗಳಲ್ಲಿ, 88 ಮೀಟರ್, 86.11 ಮೀಟರ್, 87 ಮೀಟರ್ ಹಾಗೂ ಕೊನೆಯ ಪ್ರಯತ್ನದಲ್ಲಿ 83.60 ಮೀಟರ್ ದೂರ ಎಸೆದಿದ್ದರು. ಅಂದರೆ ತನ್ನ ಎರಡನೇ ಎಸೆತದಲ್ಲಿ ನೀರಜ್ ಅವರು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಹಾಗಂತ ನೀರಜ್ ಚೋಪ್ರಾ ಅವರ ನೈಜ ಪ್ರದರ್ಶನ ಈ ಸ್ಪರ್ಧೆಯಲ್ಲಿ ಹೊರಬರಲಿಲ್ಲ.

ಇನ್ನು ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚೆಕ್ ಗಣರಾಜ್ಯದ ಜಾಕುಬ್ ವಡ್ಲೇಜೆಚ್ ಅವರು ಬೆಳ್ಳಿಯ ಪದಕವನ್ನು ಗೆದ್ದುಕೊಂಡ್ರು. ಜರ್ಮನಿಯ ಜುಲಿಯನ್ ವೆಬೆಲ್ ಅವರು ಕಂಚಿನ ಪದಕಕ್ಕೆ ಸಮಧಾನಪಟ್ಟುಕೊಂಡ್ರು.
ಕಳೆದ 13 ತಿಂಗಳಲ್ಲಿ ನೀರಜ್ ಚೋಪ್ರಾ ಅವರು ಅಪ್ರತಿಮ ಸಾಧನೆಯನ್ನು ಮಾಡಿದ್ದಾರೆ. ಟೊಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಹಾಗೂ ಡೈಮಂಡ್ ಲೀಗ್ ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇನ್ನು ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಫೈನಲ್ಸ್ ನಲ್ಲಿ ಭಾಗವಹಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2017 ಮತ್ತು 2018ರಲ್ಲಿ ಭಾಗವಹಿಸಿದ್ರು. ಅಲ್ಲದೆ ಕ್ರಮವಾಗಿ ಏಳು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದರು.
ಇದೀಗ ಮೂರನೇ ಪ್ರಯತ್ನದಲ್ಲಿ ಚಿನ್ನ ಗೆದ್ದುಕೊಂಡು 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಗೆ ನೇರವಾಗಿ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ 30 ಸಾವಿರ ಡಾಲರ್ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ.