ವಿರಾಟ್ ಕೊಹ್ಲಿಯ 71ನೇ ಅಂತರಾಷ್ಟ್ರೀಯ ಶತಕದ ಕನಸು ಮತ್ತೊಂದು ಇನ್ನಿಂಗ್ಸ್ನಲ್ಲೂ ನನಸಾಗಿಲ್ಲ. ಬರ್ಮಿಂಗ್ಹ್ಯಾಂನಲ್ಲಿ ವಿರಾಟ್ ಶತಕ ಸಿಡಿಸುತ್ತಾರೆ ಅನ್ನುವ ಆಸೆ ಆಸೆಯಾಗಿಯೇ ಉಳಿದಿದೆ. ಒಂದೇ ಒಂದು ಶತಕ ವಿರಾಟ್ ಕೊಹ್ಲಿಯನ್ನುಇನ್ನಿಲ್ಲದಂತೆ ಕಾಡುತ್ತಿದೆ.
ಎಡ್ಜ್ಬಾಸ್ಟನ್ ಮೈದಾನದಲ್ಲಿ ವಿರಾಟ್ ಚೇತೇಶ್ವರ ಪೂಜಾರಾ ವಿಕೆಟ್ ಪತನದ ಬಳಿಕ ಕಣಕ್ಕಿಳಿದಿದ್ದರು. ಆರಂಭದಲ್ಲೇ ಜೇಮ್ಸ್ ಆ್ಯಂಡರ್ಸನ್ ಮತ್ತು ಹೊಸ ಮ್ಯಾಥ್ಯೂ ಪ್ರಾಟ್ ಬೌಲಿಂಗ್ನಲ್ಲಿ ಚಾಲೆಂಜ್ ಎದುರಾಗಿತ್ತು. ಆದರೆ ವಿರಾಟ್ ಎಚ್ಚರಿಕೆಯ ಆಟಕ್ಕೆ ಕೈಹಾಕಿದ್ದರು.
ವಿರಾಟ್ ಬ್ಯಾಟ್ನಿಂದ 2 ಆಕರ್ಷಕ ಬೌಂಡರಿಗಳು ಸಿಡಿದಾಗ ಕೊಂಚ ನೆಮ್ಮದಿಯಾಗಿತ್ತು. ಆ್ಯಂಡರ್ಸನ್ ಎಸೆತಗಳನ್ನು ಕ್ರೀಸ್ನಿಂದ ಹೊರನಿಂತು ಆಡುತ್ತಿದ್ದರು. ಪ್ರಾಟ್ ಎಸೆತಗಳಲ್ಲಿ ರನ್ಗಳಿಸುತ್ತಿದ್ದಾರೆ. ಆದರೆ ಪ್ರಾಟ್ ಎಸೆತವೊಂದು ವಿರಾಟ್ ಲೆಕ್ಕಾಚಾರ ತಪ್ಪಿಸಿತು. ಔಟ್ಸೈಡ್ ಆಫ್ ಸ್ಟಂಪ್ ಹೊರಹೋಗುವ ಎಸತವನ್ನು ಕವರ್ ಮಾಡಿ ಆಡುವ ಯತ್ನದಲ್ಲಿ ಚೆಂಡನ್ನು ವಿಕೆಟ್ ಕಡೆ ಎಳೆದುಕೊಂಡರು. ವಿರಾಟ್ ಇನ್ನಿಂಗ್ಸ್ 11 ರನ್ಗಳಿಗೆ ಅಂತ್ಯಕಂಡಿತ್ತು.
ವಿರಾಟ್ ಟೆಸ್ಟ್ ಕ್ರಿಕೆಟ್ನಲ್ಲಿ 27 ಶತಕಗಳನ್ನುಸಿಡಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 43 ಶತಕ ಬಾರಿಸಿದ್ದಾರೆ. 70 ಅಂತರಾಷ್ಟ್ರೀಯ ಶತಕಸಿಡಿಸಿರುವ ವಿರಾಟ್ ಕಳೆದ ಎರಡೂವರೆ ವರ್ಷಗಳಿಂದ ಮೂರಂಕಿ ಸಂಭ್ರಮಕ್ಕಾಗಿ ಪರದಾಡುತ್ತಿದ್ದಾರೆ. 2019ರ ನವೆಂಬರ್ನಲ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ ಮೇಲೆ ಇಲ್ಲಿ ತನಕ ಶತಕದ ಆಟ ಬಂದಿಲ್ಲ. ವಿರಾಟ್ ಅಭಿಮಾನಿಗಳಿಗೆ ಇದು ಅರಗಿಸಿಕೊಳ್ಳಲಾಗದ ವಿಷಯವಾಗಿ ಪರಿಣಮಿಸಿದೆ.