Vijay Hazare: ಕರ್ನಾಟಕದ ಬೌಲಿಂಗ್ ಬಲೆಗೆ ಬಿದ್ದ ಸಿಕ್ಕಿಂ
ಭರವಸೆಯ ಬೌಲರ್ ಗಳಾದ ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ಸಿಕ್ಕಿಂ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ ತಂಡದ ಪರ ನಿಲೇಶ್ ಹಾಗೂ ಸುಮಿತ್ ಸಿಂಗ್ ತಂಡಕ್ಕೆ ಕೊಂಚ ನೆರವಾದರು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನಿಲೇಶ್ ಎಲ್. 26 ರನ್ ಬಾರಿಸಿದರು. ಸುಮಿತ್ ಸಿಂಗ್ 62 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿದರು. ಅಂತಿಮವಾಗಿ ಸಿಕ್ಕಿಂ 46.2 ಓವರ್ ಗಳಲ್ಲಿ 117 ರನ್ ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕದ ಪರ ವಾಸುಕಿ ಕೌಶಿಕ್ 16 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಸ್ಪಿನ್ ಬೌಲರ್ ಗಳಾದ ಶ್ರೇಯಸ್ ಗೋಪಾಲ್ ಹಾಗೂ ಗೌತಮ್ ತಲಾ ಮೂರು ವಿಕೆಟ್ ಉರುಳಿಸಿದರು.
ಕರ್ನಾಟಕದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ಆರಂಭದಲ್ಲಿ ಎಡವಿದರು. ಪರಿಣಾಮ 37 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಕರ್ನಾಟಕ ಸಂಕಷ್ಟದಲ್ಲಿತ್ತು. ಐದನೇ ವಿಕೆಟ್ ಗೆ ಮಯಾಂಕ್ ಅಗರ್ ವಾಲ್ ಹಾಗೂ ನಿಕಿನ್ ಜೋಸ್ (ಅಜೇಯ 46) ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ನಾಯಕ ಮಯಾಂಕ್ 7 ಬೌಂಡರಿ ಸಹಾಯದಿಂದ ಅಜೇಯ 54 ರನ್ ಸಿಡಿಸಿದರು. ಕರ್ನಾಟಕ ನಿಗದಿತ ಗುರಿಯನ್ನು 24.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 121 ರನ್ ಸೇರಿಸಿ ಜಯ ಸಾಧಿಸಿತು.