Venkatesh Prasad – ಲಂಡನ್ ವಿವಿಯಿಂದ ಮಾಸ್ಟರ್ ಡಿಗ್ರಿ ..!

ಕಲಿಕೆ ಅನ್ನೋದು ನಿಂತ ನೀರಾಗಬಾರದು. ಅದು ನೀರಿನಂತೆ ಸದಾ ಹರಿಸುತ್ತಿರಬೇಕು. ಕಲಿಕೆ ಅನ್ನೋದಕ್ಕೆ ನಿರ್ದಿಷ್ಟವಾದ ಗಡಿಯನ್ನಿಟ್ಟುಕೊಳ್ಳಬಾರದು. ಗಡಿಯನ್ನು ದಾಟಿ ಮುಂದೆ ಸಾಗುತ್ತಿರಬೇಕು. ಅದಕ್ಕೆ ವಯಸ್ಸು ಮುಖ್ಯವಲ್ಲ. ಮನಸ್ಸು ಮತ್ತು ಗುರಿ ಇರಬೇಕು ಅಷ್ಟೇ.
ಹಾಗೇ ನಮ್ಮ ವೆಂಕಟೇಶ್ ಪ್ರಸಾದ್ ಕೂಡ. ಹೌದು, ವೆಂಕಿ ಅಂದ್ರೆ ಟೀಮ್ ಇಂಡಿಯಾದ ಮಾಜಿ ವೇಗಿ. 90ರ ದಶಕದಲ್ಲಿ ಕರ್ನಾಟಕ ಮತ್ತು ಟೀಮ್ ಇಂಡಿಯಾದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿದ್ದ ವೆಂಕಿ, ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದ ನಂತರ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಕೂಡ ಆಗಿದ್ದರು.
ಇದೀಗ ವೆಂಕಟೇಶ್ ಪ್ರಸಾದ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಬದಲಾಗಿ ಕಲಿಕೆಯಲ್ಲಿ.

ಹೌದು, ವೆಂಕಟೇಶ್ ಪ್ರಸಾದ್ ಅವರು ಲಂಡನ್ ವಿಶ್ವ ವಿದ್ಯಾನಿಲಯದಿಂದ ಅಂತಾರಾಷ್ಟ್ರೀಯ ಕ್ರೀಡಾ ನಿರ್ವಹಣೆಯಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡಿದ್ದಾರೆ.
52ರ ಹರೆಯದ ವೆಂಕಟೇಶ್ ಪ್ರಸಾದ್ ಅವರು ಈ ವಿಚಾರವನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಲಿಕೆಯನ್ನು ಎಂದೂ ಕೂಡ ನಿಲ್ಲಿಸಬೇಡಿ. ಯಾಕೆಂದ್ರೆ, ಬದುಕು ಕಲಿಸುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಲಂಡನ್ ವಿವಿಯಿಂದ ಅಂತಾರಾಷ್ಟ್ರೀಯ ಕ್ರೀಡಾ ನಿರ್ವಹಣೆಯಲ್ಲಿ ಮಾಸ್ಟರ್ಸ್ ಪಡೆದುಕೊಂಡಿರುವುದು ಹೆಮ್ಮೆಯನ್ನುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ.
ಅಂದ ಹಾಗೇ ವೆಂಕಟೇಶ್ ಪ್ರಸಾದ್ ಅಂದ ತಕ್ಷಣ ನೆನಪಿಗೆ ಬರೋದು 1996ರ ವಿಶ್ವಕಪ್ ಪಂದ್ಯ. ನಮ್ಮ ಬೆಂಗಳೂರಿನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಪ್ರಸಾದ್ ಮತ್ತು ಅಮೀರ್ ಸೊಹೈಲ್ ನಡುವಿನ ಕಿರಿಕ್ ಮತ್ತು ಸೊಹೈಲ್ ಅವರನ್ನು ಔಟ್ ಮಾಡಿದಾಗ ಪ್ರಸಾದ್ ಅವರ ಸಂಭ್ರಮವೇ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತದೆ.
ಭಾರತದ ಪರ 33 ಟೆಸ್ಟ್ ಪಂದ್ಯಗಳನ್ನು ಆಡಿರುವ ವೆಂಕಿ 96 ವಿಕೆಟ್ ಪಡೆದಿದ್ದಾರೆ. ಅದೇ ರೀತಿ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಗಳನ್ನು ಉರುಳಿಸಿದ್ದಾರೆ.