ಎಫ್ಐಎಚ್ ಹಾಕಿ ಮಹಿಳಾ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾರತ ಬಿ ಗುಂಪಿನ ಎರಡನೇ ಪಂದ್ಯದಲ್ಲಿ ಚೀನಾ ವಿರುದ್ಧ ಡ್ರಾ ಸಾಧಿಸಿದೆ.
ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 1-1 ಗೋಲುಗಳಿಂದ ಚೀನಾ ವಿರುದ್ಧ ಡ್ರಾ ಸಾಧಿಸಿದೆ. ಈ ಮೂಲಕ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ಎರಡು ಅಂಕಗಳನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾ ಸಹ ಇಷ್ಟೇ ಅಂಕಗಳನ್ನು ಕಲೆ ಹಾಕಿದರೂ, ಗೋಲುಗಳ ಸಂಖ್ಯೆಯಲ್ಲಿ ಭಾರತಕ್ಕಿಂತಲೂ ಉತ್ತಮವಾಗಿದ್ದರಿಂದ ಎರಡನೇ ಸ್ಥಾನದಲ್ಲಿದೆ. ಗುರುವಾರ ಮೂರನೇ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದ್ದು, ಈ ಪಂದ್ಯ ಸವಿತಾ ಪಡೆಗೆ ಮಹತ್ವದಾಗಿದೆ. ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ಇದೆ.
ಚೀನಾದ ಪರ ಜಿಯಾಲಿ ಜೆಂಗ್ (26ನೇ ನಿಮಿಷ) ಮತ್ತು ಭಾರತದ ವಂದನಾ ಕಟಾರಿಯಾ (45ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಭಾನುವಾರ ನಡೆದ ತಮ್ಮ ಮೊದಲ ಪಂದ್ಯದಲ್ಲಿ, ಭಾರತವು ಇಂಗ್ಲೆಂಡ್ ಅನ್ನು 1-1 ಡ್ರಾ ಸಾಧಿಸಿತ್ತು. ಈ ಪಂದ್ಯದಲ್ಲೂ ವಂದನಾ ಗೋಲು ಗಳಿಸಿದ್ದರು. ಮತ್ತು ಚೀನಾ ಕೂಡ ನ್ಯೂಜಿಲೆಂಡ್ ವಿರುದ್ಧ 2-2 ಡ್ರಾ ಸಾಧಿಸಿತ್ತು.
ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ. ಎರಡನೇ ಅವಧಿಯಲ್ಲಿ ಚೀನಾ ಆರಂಭದಲ್ಲೇ ಗೋಲು ಬಾರಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಈ ಅವಧಿಯಲ್ಲಿ ಚೀನಾ 1-0 ಮುನ್ನಡೆ ಸಾಧಿಸಿತ್ತು.
ಮೂರನೇ ಅವಧಿಯ ಆರಂಭದಲ್ಲಿ ಭಾರತ ಆಕ್ರಮಕಾರಿ ಆಟಕ್ಕೆ ಮಣೆ ಹಾಕಿತು. ಪರಿಣಾಮ ಇದೇ ಅವಧಿಯ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾ ಪರ ವಂದನಾ ಗೋಲು ಬಾರಿಸಿ ಅಂತರವನ್ನು ಸಮನಾಗಿಸಿದರು. ಕೊನೆಯ ಅವಧಿಯಲ್ಲಿ ಗೋಲು ಬಾರಿಸುವ ಉಭಯ ತಂಡಗಳ ಆಸೆ ಫಲಿಸಲಿಲ್ಲ.