ಕರ್ನಾಟಕ ರಣಜಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದೆ. ಬೆಂಗಳೂರಿನ ಆಲೂರು ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ತಂಡ ಆಘಾತ ಕಂಡಿತು. ಉತ್ತರ ಪ್ರದೇಶ ತಂಡ ಐದು ವಿಕೆಟ್ ಗಳಿಂದ ಪಂದ್ಯ ಗೆದ್ದು ನಾಲ್ಕರ ಹಂತ ಪ್ರವೇಶಿಸಿದೆ.
ಬುಧವಾರ ಎಂಟು ವಿಕೆಟ್ ಗೆ 100 ರನ್ ಗಳಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 114 ರನ್ ಗಳಿಗೆ ಆಲೌಟ್ ಆಯಿತು. 213 ರನ್ ಗಳ ಗುರಿಯನ್ನು ಹಿಂಬಾಲಿಸಿದ ಉತ್ತರ ಪ್ರದೇಶ ತಂಡ ಐದು ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.
ವಿಜೇತ ತಂಡದ ಪರ ನಾಯಕ ಕರಣ್ ಶರ್ಮಾ ಹಾಗೂ ಪ್ರಿನ್ಸ್ ಜಯದೇವ್ ಆರನೇ ವಿಕೆಟ್ ಗೆ 99 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಕರಣ್ ಶರ್ಮಾ 163 ಎಸೆತಗಳಲ್ಲಿ ಅಜೇಯ 93 ರನ್ ಬಾರಿಸಿದರು. ಇವರ ಅಮೋಘ ಇನ್ನಿಂಗ್ಸ್ ನಲ್ಲಿ 13 ಬೌಂಡರಿ, 1 ಸಿಕ್ಸರ್ ಸೇರಿವೆ. ಪ್ರಿನ್ಸ್ 3 ಬೌಂಡರಿ, 1 ಸಿಕ್ಸರ್ ಸಹಾಯಿಂದ ಅಜೇಯ 33 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಪ್ರಿಯಂ ಗರ್ಗ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 52 ರನ್ ಬಾರಿಸಿದರು.
ಕರ್ನಾಟಕದ ಪರ ವಿಜಯಕುಮಾರ್ ವೈಶಾಕ್ ಮೂರು ವಿಕೆಟ್ ಪಡೆದು ಸೋಲಿನಲ್ಲಿ ಮಿಂಚಿದರು.