US Open 2022 – ಸೆರೆನಾ ವಿಲಿಯಮ್ಸ್ ಮುನ್ನಡೆ, ಸಿಮೊನಾಗೆ ಶಾಕ್..!
ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರು ಮುನ್ನಡೆ ಸಾಧಿಸಿದ್ದಾರೆ.
ಆಧುನಿಕ ಮಹಿಳಾ ಟೆನಿಸ್ ಜಗತ್ತಿನ ಮಹಾರಾಣಿ ಸೆರೆನಾ ವಿಲಿಯಮ್ಸ್ ಅವರು ತನ್ನ ವೃತ್ತಿ ಬದುಕಿನ ಕೊನೆಯ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯನ್ನು ಆಡುತ್ತಿದ್ದಾರೆ. ಈಗಾಗಲೇ 23 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೆರೆನಾ ವಿಲಿಯಮ್ಸ್ ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಸೆರೆನಾ ಕನಸು ಇನ್ನೂ ಕೂಡ ಈಡೇರಲಿಲ್ಲ.
ವರ್ಷದ ಕೊನೆಯ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಾಗಿರುವ ಯುಎಸ್ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್ ಮೊದಲ ಸುತ್ತಿನಲ್ಲಿ 6-3, 6-3ರಿಂದ ಡಂಕಾ ಕೊವಿನಿಕ್ ಅವರನ್ನು ಸುಲಭವಾಗಿ ಪರಾಭವಗೊಳಿಸಿದ್ರು.
21ನೇ ಬಾರಿ ಯುಎಸ್ ಓಪನ್ ಟೂರ್ನಿಯಲ್ಲಿ ಆಡುತ್ತಿರುವ ಸೆರೆನಾ ವಿಲಿಯಮ್ಸ್ ಅವರು 106 ಪಂದ್ಯವನ್ನು ಗೆದ್ದುಕೊಂಡಿದ್ದಾರೆ.
ಇನ್ನು ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಎರಡು ಬಾರಿ ಗ್ರ್ಯಾಂಡ್ ಸ್ಲ್ಯಾಂ ಚಾಂಪಿಯನ್ ಆಗಿದ್ದ ಸಿಮೋನ್ ಹಲೆಪಿ ಅವರು ಆಘಾತ ಅನುಭವಿಸಿದ್ದಾರೆ. ಸಿಮೊನ್ ಹಲೆಪಿ ಅವರು ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಉಕ್ರೇನ್ ನ ಡರಿಯಾ ಸ್ನಿಗುರ್ ವಿರುದ್ಧ ಸಿಮೋನ್ ಹಲೆಪಿ ಅವರು 6-2, 0-6, 6-4ರಿಂದ ಸೋಲು ಅನುಭವಿಸಿದ್ದರು.
ಡರಿಯಾ ಸ್ನಿಗುರ್ ಅವರು ಅರ್ಹತಾ ಸುತ್ತಿನ ಮೂಲಕ ಪ್ರವೇಶ ಗಿಟ್ಟಿಸಿಕೊಂಡಿದ್ದರು.
ಹಾಗೇ ಮಹಿಳೆಯರ ಮತ್ತೊಂದು ಸಿಂಗಲ್ಸ್ ನಲ್ಲಿ ಅಮೆರಿಕಾದ ಕೊಕೊ ಗಾಫ್ ಅವರು 6-2, 6-3ರಿಂದ ಫ್ರಾನ್ಸ್ ನ ಲಿಯೊಲಿಯಾ ಜೀನ್ ಜೀನ್ ಅವರನ್ನು ಸೋಲಿಸಿದ್ರು.