US Open 2022 – ಸೆಮಿಫೈನಲ್ ಪ್ರವೇಶಿಸಿದ ಐಗಾ ಸ್ವಿಟೆಕ್ – ಫ್ರಾನ್ಸೆಸ್ ಟೈಫೋಯ್..!

ವಿಶ್ವದ ನಂಬರ್ ವನ್ ಆಟಗಾರ್ತಿ ಐಗಾ ಸ್ವಿಟೆಕ್ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐಗಾ ಸ್ವಿಟೆಕ್ ಅವರು 6-3, 7-6ರಿಂದ ಅಮೆರಿಕಾದ ಜೆಸ್ಸಿಕಾ ಪೆಗುಲಾ ಅವರನ್ನು ಪರಾಭವಗೊಳಿಸಿದ್ರು. ಈ ಮೂಲಕ ಐಗಾ ಸ್ವಿಟೆಕ್ ಅವರು ಯುಎಸ್ ಓಪನ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದ ಸಾಧನೆ ಮಾಡಿದ್ದಾರೆ.
ಇನ್ನು ಮಹಿಳೆಯರ ಇನ್ನೊಂದು ಪಂದ್ಯದಲ್ಲಿ ಆರ್ಯಾನಾ ಸೆಬಾಲೆಂಕಾ ಅವರು ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವಾ ಅವರನ್ನು 6-1, 7-6 ರಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಹಾಗೇ ಪುರುಷರ ಸಿಂಗಲ್ಸ್ ನಲ್ಲಿ ಅಮೆರಿಕಾದ ಫ್ರಾನ್ಸೆಸ್ ಟೈಫೋಯ್ ಅವರು ನಾಲ್ಕರ ಘಟ್ಟ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಫ್ರಾನ್ಸೆಸ್ ಟೈಫೋಯ್ 7-6, 7-6, 6-4ರಿಂದ ರಷ್ಯಾದ ಆಂಡ್ರೆಯಸ್ ರುಬ್ಲೇವ್ ಅವರನ್ನು ಮಣಿಸಿದ್ರು. ಈ ಮೂಲಕ ಫ್ರಾನ್ಸೆಸ್ ಅವರು ಮೊದಲ ಬಾರಿ ಯುಎಸ್ ಓಪನ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಒಂದು ವೇಳೆ ಫ್ರಾನ್ಸೆಸ್ ಟೈಫೋಯ್ ಪ್ರಶಸ್ತಿ ಗೆದ್ರೆ, 2003ರ ಬಳಿಕ ಅಮೆರಿಕಾದ ಆಟಗಾರ ಯುಎಸ್ ಓಪನ್ ಗೆದ್ದ ಹಿರಿಮೆಗೆ ಪಾತ್ರರಾಗಲಿದ್ದಾರೆ. 2003ರಲ್ಲಿ ಆಂಡಿ ರಾಡಿಕ್ ಅವರು ಯುಎಸ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.